ಬೆಂಗಳೂರು, ಜು.24- ಕೊರೊನಾ ನಿಯಮ ಪಾಲನೆಯೊಂದಿಗೆ ಜು. 25ರಿಂದ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ದೇವಾಲಯ, ಗುರುದ್ವಾರ, ಚರ್ಚ್, ಮಸೀದಿ ಸೇರಿದಂದತೆ ಇನ್ನಿತರ ಧಾರ್ಮಿಕ ಸ್ಥಳಗಳಲ್ಲಿ ನಾಳೆಯಿಂದ ಕೊರೊನಾ ನಿಯಮ ಪಾಲಿಸಿಕೊಂಡು ಪೂಜೆ-ಪುನಸ್ಕಾರ ನಡೆಸಬಹುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಾತ್ರೆ, ಉತ್ಸವ, ಮೆರವಣಿಗೆ ಮತ್ತಿತರ ಜನ ಸಮೂಹ ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.
ಇದರ ಜತೆಗೆ ಅಮ್ಯೂಜ್‍ಮೆಂಟ್ ಪಾರ್ಕ್ ಇನ್ನಿತರ ಮನೋರಂಜನಾ ಕೇಂದ್ರಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ ಜಲಕ್ರೀಡೆ, ನೀರಿಗೆ ಸಂಬಂಧಿಸಿದಂತಹ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸಲಾಗಿದೆ.

