ಮೈಸೂರು: ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೇಯರ್ ಪಟ್ಟ ಅಲಂಕರಿಸಿದೆ.
ಮೈಸೂರಿನ ನೂತನ ಮೇಯರ್ ಆಗಿ ಸುನಂದಾ ಪಾಲನೇತ್ರಾ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ತಿಕ್ಕಾಟದ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಹಳೇ ದೋಸ್ತಿಗಳ ಮೈತ್ರಿ ಸಂಪೂರ್ಣವಾಗಿ ಮುರಿದುಬಿದ್ದಿದೆ. ಇದು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ.
ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟದಲ್ಲಿ ಕೊನೆಗೂ ಮೇಯರ್ ಹುದ್ದೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಈ ಮೂಲಕ ಸುನಂದಾ ಪಾಲನೇತ್ರ ಅವರು ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿಯ ಮೊತ್ತ ಮೊದಲ ಮೇಯರ್ ಆಗಿ ಆಯ್ಕೆಯಾದರು.
ಕೊನೇ ಗಳಿಗೆವರೆಗೂ ಆಪರೇಷನ್
ಬಿಜೆಪಿಗೆ ಮೇಯರ್ ಪಟ್ಟ ಸಿಗಲೇಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್, ಕೊನೇ ಗಳಿಗೆವರೆಗೂ ರಹಸ್ಯವನ್ನು ಕಾಪಾಡಿಕೊಂಡರು. ತಮ್ಮ ಕಾರ್ಯತಂತ್ರವೇನು? ಎಂಬಿತ್ಯಾದಿ ಎಲ್ಲ ಮಾಹಿತಿಗಳನ್ನು ಬಿಟ್ಟುಕೊಡದೆ ಕುತೂಹಲ ಸೃಷ್ಟಿಸಿದ್ದರು. ಉಳಿದ ಬಿಜೆಪಿ ನಾಯಕರು ಕೂಡ ಇದೇ ಹೆಜ್ಜೆ ಅನುಸರಿಸಿದ್ದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದಲೆಸ್. ಎ. ರಾಮದಾಸ್ ಮತ್ತು ನಾಗೇಂದ್ರ ಅವರು ಒಂದು ತಂಡದಂತೆ ಕೆಲಸ ಮಾಡಿದರು. ಇದಕ್ಕೆ ಪೂರಕವೋ ಎನ್ನುವಂತೆ ಶಾಸಕ ಜಿಟಿ ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪಾಲಿಕೆಯತ್ತ ಸುಳಿಯಲಿಲ್ಲ. ಇದು ಬಿಜೆಪಿಗೆ ವರದಾನವಾಯಿತು.
ನಿನ್ನೆ ಸಂಜೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್ ತೊರೆದಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಯಿತು.
ಪಾಲಿಕೆಯ ಒಟ್ಟು 72 ಸ್ಥಾನಗಳ ಪೈಕಿ ಬಿಜೆಪಿ 26, ಕಾಂಗ್ರೆಸ್ 22, ಜೆಡಿಎಸ್ 22 ಮತಗಳನ್ನು ಪಡೆದರೆ, ಇಬ್ಬರು ಗೈರಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದುಬಿದ್ದ ಕಾರಣಕ್ಕೆ ಬಲವೇ ಇಲ್ಲದ ಬಿಜೆಪಿ ನಿರಾಯಾಸವಾಗಿ ಅಧಿಕಾರದ ಗದ್ದುಗೆಗೇರಿದೆ.
ಯಶಸ್ವಿಯಾದ ಸಚಿವ ಸೋಮಶೇಖರ್
ವಾರದ ಹಿಂದೆಯಷ್ಟೆ ಜೆಡಿಎಸ್ ಮುಖಂಡ ಹಾಗೂ ಶಾಸಕ ಸಾ.ರಾ.ಮಹೇಶ್ ಜತೆ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಸಂಸದರು, ಶಾಸಕರು, ಬಿಜೆಪಿ ನಗರಾಧ್ಯಕ್ಷರು, ಮುಡಾ ಅಧ್ಯಕ್ಷರ ಜೊತೆಗೂಡಿ ಭೇಟಿಯಾಗಿ ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹೆಜ್ಜೆ ಬಿಜೆಪಿಗೆ ಚಿನ್ನದಂಥ ಅವಕಾಶ ಸೃಷ್ಟಿಸಿತು. ಒಳಗೊಳಗೇ ಜೆಡಿಎಸ್ ತನ್ನ ದೋಸ್ತಿ ಪಕ್ಷ ಕಾಂಗ್ರೆಸ್ ನಿಂದ ದೂರ ಸರಿಯುತ್ತಾ ಬಿಜೆಪಿಗೆ ಹತ್ತಿರವಾಯಿತು.
ಮೈಸೂರು ಪಾಲಿಕೆಯ 38 ವರ್ಷದ ಇತಿಹಾಸದಲ್ಲೇ ಪ್ರಥಮ
160ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಮೈಸೂರು ಪೌರ ಸಂಸ್ಥೆಯು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿತು. ಅಲ್ಲಿಂದ ಇಲ್ಲಿಯವರೆಗಿನ 38 ವರ್ಷಗಳ ಅವಧಿಯಲ್ಲಿ ಬಿಜೆಪಿ ಒಂದು ಬಾರಿಯೂ ಮೇಯರ್ ಪಟ್ಟವನ್ನು ಅಲಂಕರಿಸಿರಲಿಲ್ಲ. ಇದೀಗ ಬಿಜೆಪಿ ಸಾಧನೆ ತೋರಿದೆ.
ಸಿಎಂ, ಮಾಜಿ ಸಿಎಂ ಅಭಿನಂದನೆ
ಕಳೆದ ಒಂದು ವರ್ಷದಿಂದ ಅತ್ಯಂತ ಚುರುಕಿನಿಂದ 24×7 ಪಕ್ಷದ ನಿರ್ದೇಶನಗಳನ್ನು ಮತ್ತು ಸರ್ಕಾರದ ಜನಪ್ರಿಯ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ಸನ್ನು ಈಗಾಗಲೇ ಸಾಧಿಸಿದ್ದೀರಿ. ಇದೀಗ ಮೈಸೂರಿನ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು ಎಂದು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಚಿವ ಸೋಮಶೇಖರ್ ಹಾಗೂ ನೂತನ ಮೇಯರ್ ಸುನಂದಾ ಪಾಲನೇತ್ರಾ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
ಎಸ್.ಟಿ.ಸೋಮಶೇಖರ್ ನ್ನು ಶ್ಲಾಘಿಸಿದ ಸಿಎಂ
ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಹೊಂದಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕಟೀಲ್ ಅಭಿನಂದನೆ
ಮೇಯರ್ ಪಟ್ಟ ಬಿಜೆಪಿಗೆ ಒಲಿಯುತ್ತಿದ್ದಂತೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದು ತಿಳಿಸಿದ್ದಾರೆ.
ಪಕ್ಷಗಳ ಬಲಾಬಲ
ಒಟ್ಟು ಸ್ಥಾನ: 72
ಬಿಜೆಪಿ: 26
ಕಾಂಗ್ರೆಸ್: 22
ಜೆಡಿಎಸ್: 22
ಗೈರು ಹಾಜರಿ: 2

