ಗ್ರಾಮೀಣ ಜನರ ನವ ಚರಿತ್ರೆಯನ್ನು ಬರೆದವರು ರಾಮಕೃಷ್ಣ ಹೆಗಡೆ –ಡಾ. ವೈ. ಡಿ. ರಾಜಣ್ಣ

ಮೈಸೂರು: ಮೈಸೂರು ಯುವ ಬಳಗ ವತಿಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮದಿನೋತ್ಸವದ ಅಂಗವಾಗಿ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವತಂತ್ರ ಹೋರಾಟಗಾರರ ಉದ್ಯಾನ ವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ “ಮೌಲ್ಯಧಾರಿತ ಸಜ್ಜನ ರಾಜಕಾರಣಿ ರಾಮಕೃಷ್ಣ ಹೆಗಡೆ” ವಿಚಾರವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ ಡಿ ರಾಜಣ್ಣ ರವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯ ಮೂಲಕ ನಾಡಿನ ಗ್ರಾಮೀಣ ಭಾಗದ ಜನರ ಹೊಸ ಚರಿತ್ರೆಯನ್ನು ಬರೆದವರು ರಾಮಕೃಷ್ಣ ಹೆಗಡೆಯವರು ಎಂದರು.

ರಾಜ್ಯದ ಹಿರಿಯ ಹಾಗೂ ಮೌಲ್ಯಾಧಾರಿತ ರಾಜಕಾರಣಿ ಎಂದೆ ಜನಪ್ರಿಯತೆ ಗಳಿಸಿದ್ದ ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಿ, ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದು ತಿಳಿಸಿದರು.

1985ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದ ಇವರು ರಾಜ್ಯದಲ್ಲಿ ಪಂಚಾಯತ್ ರಾಜ್ ಕಾನೂನು, ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲು ಬಾರಿಗೆ ಜಾರಿಗೆ ತಂದ ರಾಜ್ಯ ಎಂಬ ಹೆಗ್ಗಳಿಕೆಯೊಂದಿಗೆ, ರೈತರ ಸಾಲ ಮನ್ನಾ, ಕಡಿಮೆ ಬಡ್ಡಿದರದಲ್ಲಿ ಸಾಲ ಸೇರಿದಂತೆ ಹತ್ತು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಮನದಾಳದಲ್ಲಿ ಹೆಗಡೆ ಅವರು ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕೇಬಲ್ ಮಹೇಶ್ , ವಿಕ್ರಂ ಅಯ್ಯಂಗಾರ್ , ವಿಘ್ನೇಶ್ವರ ವಿ ಭಟ್ , ಮೈಸೂರು ಯುವ ಬಳಗದ ಅಧ್ಯಕ್ಷ ನವೀನ್ ನವೀನ್ , ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ , ಹರೀಶ್ , ಮಹಾದೇವಿ, ಜಾನಪ, ಸನಂತ್ ಹಾಗೂ ಇನ್ನಿತರರು ಹಾಜರಿದ್ದರು.