ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯ ಕೇಂದ್ರವಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯನ್ನು ಮೈಸೂರು ಅರಮನೆ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳಿಗೆ ಸಚಿವ ಎಸ್.ಟಿ. ಸೋಮಶೇಖರ್ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷತ್ ನೇತೃತ್ವದಲ್ಲಿ ಗಜ ಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.
ಅರಮನೆ ಅಂಗಳ ಪ್ರವೇಶಿಸಿದ ದಸರಾ ಗಜಪಡೆಯ ಆನೆಗಳಿಗೆ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಅರಮನೆ ಬ್ಯಾಂಡ್, ಮಂಗಳ ವಾದ್ಯ, ಪೂರ್ಣಕುಂಭ ಸ್ವಾಗತದ ಮೂಲಕ ಆನೆಗಳನ್ನು ಅರಮನೆ ಆಡಳಿತ ಮಂಡಳಿ ಬರಮಾಡಿಕೊಂಡಿತು.
ಆನೆಗಳಿಗೆ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ, ತೆಂಗಿನ ಕಾಯಿ ನೀಡಿ ಸ್ವಾಗತ ಕೋರಲಾಯಿತು.
ಅಭಿಮನ್ಯು, ಗೋಪಾಲಸ್ವಾಮಿ, ವಿಕ್ರಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಆನೆಗಳು ಅರಮನೆ ಆವರಣದಲ್ಲಿನ ಆನೆ ಶಿಬಿರದಲ್ಲಿ ಬೀಡು ಬಿಟ್ಟಿವೆ. ಆನೆಗಳಿಗೆ ಸೆ. 19ರಿಂದ ತಾಲೀಮು ಆರಂಭಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ನಾಗೇಂದ್ರ, ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಹಲವರು ಜನಪ್ರತಿನಿಧಿಗಳು ಭಾಗಿಯಾಗಿದ್ದರು.
ಇದೇ ಮೊದಲ ಬಾರಿಗೆ ದಸರಾ ಪಾಲ್ಗೊಳ್ಳಲು ಬಂದಿರುವ ಅಶ್ವತ್ಥಾಮ ಹೆಸರಿನ ಆನೆ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್‍ಪಾತ್ ಸೇರಿದ ಘಟನೆ ನಡೆಯಿತು.
ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ಅಶ್ವತ್ಥಾಮ ರಸ್ತೆಯಿಂದ ಫುಟ್ ಪಾತ್ ಗೆ ತೆರಳಿತು. ಈ ವೇಳೆ ಮಾವುತ ಕಾವಾಡಿ ಅಶ್ವತ್ಥಾಮನನ್ನು ನಿಯಂತ್ರಿಸಿ ಫುಟ್ ಪಾತ್ ನಿಂದ ಕೆಳಗಿಳಿಸಿ ರಸ್ತೆಯಲ್ಲಿಯೇ ಆನೆಯನ್ನು ಅರಮನೆಗೆ ಕರೆ ತಂದರು.
ಇದಕ್ಕೂ ಮುನ್ನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಅರಮನೆಗೆ ಬೀಳ್ಕೊಡಲಾಯಿತು.
ಅರಣ್ಯ ಭವನದಿಂದ ಕಾಲ್ನಡಿಗೆಯಲ್ಲಿ ಹೊರಟ ದಸರಾ ಆನೆಗಳು ಮೈಸೂರಿನ ಪ್ರಮುಖ ರಸ್ತೆಗಳ ಮೂಲಕ ಮೈಸೂರು ಅರಮನೆಗೆ ಆಗಮಿಸಿತು.
ಸೆ. 13ರಂದು ಆನೆಗಳು ವೀರನಹೊಸಳ್ಳಿಯಿಂದ ಆಗಮಿಸಿ ಅರಣ್ಯಭವನದಲ್ಲಿ ಬೀಡು ಬಿಟ್ಟಿದ್ದವು. ಗಜಪಡೆ ಮೈಸೂರು ಅರಮನೆಯನ್ನು ಪ್ರವೇಶಿಸಿವೆ.

