ಮೈಸೂರು: ವಿಶ್ವ ವಿಖ್ಯಾತ ದಸರಾ ಸಂಭ್ರಮಕ್ಕೆ ಮೈಸೂರಲ್ಲಿ ಕಳೆಗಟ್ಟುತ್ತಿದೆ.
ದಸರಾ ಗಜ ಪಡೆಗೆ ಭಾರ ಹೊರುವ ತಾಲೀಮು ಇಂದೂ ಮುಂದುವರಿದಿದೆ.
ಎರಡನೇ ದಿನವಾದ ಮಂಗಳವಾರ ಧನಂಜಯ ಆನೆಗೆ ಭಾರ ಹೊರುವ ಅಭ್ಯಾಸ ನಡೆಸಲಾಯಿತು.
400 ಕೆ.ಜಿ ಮರಳಿನ ಮೂಟೆಯ ಭಾರ ಹೊತ್ತು ಧನಂಜಯ ಆನೆ ಮೈಸೂರು ಅರಮನೆ ಆವರಣದಲ್ಲಿ 2 ಸುತ್ತು ಸಾಗಿದ್ದಾನೆ. ಧನಂಜಯನ ಜೊತೆ ಉಳಿದ 7 ಆನೆಗಳು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿವೆ.
ಈ ಬಾರಿ ಕೇವಲ ಮೂರು ಆನೆಗಳಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಸೋಮವಾರ ಮೊದಲ ದಿನ ಅಭಿಮನ್ಯು ಭಾರ ಹೊತ್ತು ಸಾಗಿದ್ದ. ಮಂಗಳವಾರ ಧನಂಜಯ ಮತ್ತು ಬುಧವಾರ (ಸೆ. 22) ಗೋಪಾಲಸ್ವಾಮಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದೆ.
ಮದ್ದುಗುಂಡು ಸಿಡಿಸುವ ಡ್ರೈ ತಾಲೀಮು
ಅರಮನೆ ಆವರಣದಲ್ಲಿ ಮಂಗಳವಾರ ಫಿರಂಗಿಯ ಮೂಲಕ ಮದ್ದುಗುಂಡು ಸಿಡಿಸುವ ಡ್ರೈ ತಾಲೀಮು ನಡೆಯಿತು.
ಜಂಬೂಸವಾರಿ ದಿನ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ 21 ಕುಶಾಲತೋಪು ಸಿಡಿಸಲಾಗುತ್ತದೆ. ನಿಗದಿತ ಸಮಯದಲ್ಲಿ 21 ಕುಶಾಲತೋಪು ಸಿಡಿಸಲು ರಿಹರ್ಸಲ್ ಅನ್ನು ನಡೆಸಲಾಯಿತು.
7 ಫಿರಂಗಿ ಗಾಡಿಗಳ ಮೂಲಕ ಕುಶಾಲತೋಪು ಸಿಡಿಸಲಾಗುತ್ತದೆ.
ಸಿಎಆರ್ ನ 15ಕ್ಕೂ ಹೆಚ್ಚು ಸಿಬ್ಬಂದಿ ಮದ್ದುಗುಂಡು ಸಿಡಿಸುವ ಡ್ರೈ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದರು.

