ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಗಜರಾಜ ಅಭಿಮನ್ಯು ನೇತೃತ್ವದ ಗಜಪಡೆಗೆ ಗುರುವಾರ ಸಿಡಿಮದ್ದು ತಾಲೀಮು ನಡೆಸಲಾಯಿತು.
ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಮೈಸೂರು ಅರಮನೆ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಿತು.
ಮೊದಲ ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸುತ್ತಿರುವ ಅಶ್ವತ್ಥಾಮ ಆನೆಗೆ ಫಿರಂಗಿ ಸದ್ದಿನಿಂದ ಭಯವಾಯಿತು. ಫಿರಂಗಿ ಭಯಕ್ಕೆ ಗೋಪಾಲಸ್ವಾಮಿ ಆನೆ ಘೀಳಿಟ್ಟಿತು. ಲಕ್ಷ್ಮಿ ಹಾಗೂ ಧನಂಜಯ ಆನೆಗಳು ಕೂಡ ಸಿಡಿಮದ್ದು ಸದ್ದಿಗೆ ಬೆದರಿದವು.

21 ಸುತ್ತು ಸಿಡಿಮದ್ದು ಸಿಡಿಸಿ ಆನೆಗಳು ಹಾಗೂ ಕುದುರೆಗಳಿಗೆ ತಾಲೀಮು ನಡೆಸಲಾಯಿತು.
ಏಳು ಫಿರಂಗಿ ಗಾಡಿಗಳಿಂದ 21 ಸುತ್ತು ಸಿಡಿಮದ್ದುಗಳನ್ನು ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸಿಡಿಸಿದರು.
ಜಂಬೂ ಸವಾರಿ ವೇಳೆ ರಾಷ್ಟ್ರಗೀತೆಯನ್ನು ವಾದ್ಯಗಳಲ್ಲಿ ನುಡಿಸಲಾಗುತ್ತದೆ. ದಸರಾದ ಶುಭ ಸಾಂಕೇತಿಕವಾಗಿ ಕುಶಾಲತೋಪು ಹಾರಿಸಲಾಗುತ್ತದೆ.
ರಾಷ್ಟ್ರಗೀತೆ ನುಡಿಸುವ ಅವಧಿಯಲ್ಲಿ 21 ಬಾರಿ ಕುಶಾಲತೋಪು ಹಾರಿಸಲಾಗುತ್ತದೆ.
ಈ ವೇಳೆ ಆನೆಗಳು ಹಾಗೂ ಕುದುರೆಗಳು ಬೆದರಬಾರದೆಂಬ ಕಾರಣಕ್ಕೆ ಜಂಬೂಸವಾರಿಗೂ ಮುನ್ನ 3 ಸಾರಿ ದಸರಾದಲ್ಲಿ ಭಾಗವಹಿಸುವ ಆನೆಗಳು, ಕುದುರೆಗಳಿಗೆ ತಾಲೀಮು ನಡೆಸಲಾಗುತ್ತದೆ.
ಕುಶಾಲ ತೋಪು ಸಿಡಿಸುವ ಕಾರ್ಯ ಅತ್ಯಂತ ಕಠಿಣ ಹಾಗೂ ಸವಾಲಿನದ್ದು, ನಾಲ್ಕು ಲಾಮಗ್ ಬ್ಯಾರೆಲ್ ಹಾಗೂ ಮೂರು ಶಾರ್ಟ್ ಬ್ಯಾರೆಲ್ ಫಿರಂಗಿಗಳ ಮೂಲಕ ಒಟ್ಟು 21 ಬಾರಿ ಕುಶಾಲತೋಪು ಹಾರಿಸಲಾಗುತ್ತದೆ.
ಗನ್ ಪೌಡರ್ ಸಿಡಿದ ನಂತರ ಬ್ಯಾರೆಲ್ ಗೆ ಸಿಂಬವನ್ನು ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಸ್ವಚ್ಛಗೊಳಿಸುವುದು ಹಾಗೂ ಮದ್ದು ತುಂಬಿದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಫಿರಂಗಿ ಪಾಯಿಂಟ್ ಗೆ ಇಡುವ ಕೆಲಸ ಅತಿ ಮಹತ್ವದ್ದಾಗಿದೆ.
ಬ್ಯಾರೆಲ್ ಒಳಗೆ ಒಂದು ಸಣ್ಣ ಕಿಡಿ ಉಳಿದುಕೊಂಡರೂ ಗನ್ ಪೌಡರ್ ಹಾಕಿದ ತಕ್ಷಣವೇ ಸ್ಫೋಟವಾಗುವ ಸಂಭವ ಇರುವುದರಿಂದ ಇದರಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗಳಿಗೂ ವಿಮೆ ಮಾಡಿಸಲಾಗುತ್ತದೆ.
ಡಿಸಿಎಫ್ ಕರಿಕಾಳನ್, ಮೈಸೂರು ನಗರ ಪೆÇಲೀಸ್ ಕಮಿಷನರ್ ಡಾ. ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟೆ, ಗೀತ ಪ್ರಸನ್ನ ಅವರುಗಳು ಸಿಡಿಮದ್ದು ತಾಲೀಮು ಸಂದರ್ಭದಲ್ಲಿ ಉಪಸ್ಥಿತರಿದ್ದರು.

