ರಂಗಾಯಣ ದಸರಾ ರಂಗೋತ್ಸವ: ನಾಟಕಗಳ ಪ್ರದರ್ಶನ

ಮೈಸೂರು: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಈ ಬಾರಿಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಸರಾ ರಂಗೋತ್ಸವ ವಿಶೇಷ ಮೆರಗು ನೀಡಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ಅ. 7ರಿಂದ 14ರವರೆಗೆ 8 ದಿನಗಳ ಕಾಲ ರಂಗಾಯಣ ವತಿಯಿಂದ ದಸರಾ ರಂಗೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.

ಅ. 7 ರಂದು ವಿಧುರಾಶ್ವತ್ಥ ಹೋರಾಟದ ಕಥನಾ ಬಿಂಬಿಸುವ ಹತ್ಯಾಕಾಂಡ ನಾಟಕ ಪ್ರದರ್ಶನ. ಅ. 9, 10ರಂದು ಎರಡು ದಿನಗಳ ಪರ್ವ ನಾಟಕ ರಂಗ ಪ್ರದರ್ಶನ. 11, 12ರಂದು ಸೂತ್ರಧಾರ ನಾಟಕ ಪ್ರದರ್ಶನ. ಅ. 13, 14ರಂದು ವೈದೇಹಿ ಅವರ ಮೂಕನ ಮಕ್ಕಳು ನಾಟಕ ಪ್ರದರ್ಶನವಾಗಲಿದೆ.

ಅ. 7ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮೇಶ್ವರಿ ವರ್ಮ ಅವರು ದಸರಾ ರಂಗೋತ್ಸವ ಉದ್ಘಾಟಿಸಲಿದ್ದಾರೆ. ಕಾಲಸೇವೆ ಗುರುತಿಸಿ ರಂಗಾಯಣ ದಸರಾ ರಂಗಗೌರವ ಸಲ್ಲಿಸಲಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ಕೋವಿಡ್ ನಂತರ ಕಳೆದ ವರ್ಷ ಮೈಸೂರು ರಂಗಾಯಣಕ್ಕೆ ಅನುದಾನ ನೀಡಿಲ್ಲ. ಈ ಬಾರಿಯೂ 5 ಲಕ್ಷ ಅನುದಾನ ರಂಗಾಯಣಕ್ಕೆ ನೀಡುವಂತೆ ಮನವಿ ಮಾಡಲಾಗಿದೆ. ಅನುದಾನ ನೀಡದಿದ್ದರೂ 8 ದಿನಗಳ ಕಾಲ ದಸರಾ ರಂಗೋತ್ಸವ ಮಾಡಲಾಗುತ್ತಿದೆ. ನವರಾತ್ರಿ ರಂಗೋತ್ಸವವನ್ನು ಉಳಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ ಎಂದವರು ಹೇಳಿದರು.