ಶ್ರೀರಂಗಪಟ್ಟಣ: ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿ ಶನಿವಾರ ನಡೆದ ದಸರಾ ಸಂದರ್ಭದಲ್ಲಿ ಮರದ ಅಂಬಾರಿಯಲ್ಲಿ ನಾಡ ಅಧಿದೇವತಿ ಚಾಮುಂಡೇಶ್ವರಿಯನ್ನು ಆನೆ ಗೋಪಾಲಸ್ವಾಮಿ ಹೊತ್ತು ಸಾಗುವಾಗ ಪಟಾಕಿ ಶಬ್ದಕ್ಕೆ ಗಾಬರಿಯಾಗಿ ಹಿಮ್ಮುಖವಾಗಿ ಓಡಿದ ಘಟನೆ ನಡೆದಿದೆ.
ದಸರಾ ಅಂಗವಾಗಿ ನಾಡದೇವತೆ ತಾಯಿ ಚಾಮುಂಡೇಶ್ವರಿದೇವಿಯನ್ನು ಮರದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ, ಆನೆ ಗೋಪಾಲಸ್ವಾಮಿ ಹೊತ್ತು ನಿಂತಿದ್ದ.
ಈ ವೇಳೆ ದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಪಟಾಕಿ ಸಿಡಿಸಿಸಲಾಯಿತು.
ಪಟಾಕಿ ಸದ್ದಿಗೆ ಬೆದರಿದ ಆನೆ ಗೋಪಾಲಸ್ವಾಮಿ ಗಾಬರಿಗೊಂಡು ಒಂದು ಸುತ್ತು ತಿರುಗಿತು.
ಆಗ ಆನೆ ಸಮೀಪದಲ್ಲಿದ್ದ ಸಾರ್ವಜನಿಕರು ಹೆದರಿ ಕಿರುಚುತ್ತಾ ಓಡಿದರು.
ತಕ್ಷಣ ಆನೆ ಕಾವಾಡಿಗಳು ಗೋಪಾಲಸ್ವಾಮಿ ಹಿಂದೆ ಓಡಿ ಹೋಗಿ ಅದನ್ನು ಸಮಾಧಾನಪಡಿಸಿದರು.
ಆನೆ ಹಿಮ್ಮುಖವಾಗಿ ಚಲಿಸಿ, ಒಂದು ಸುತ್ತು ಹಾಕಿ ನಿಂತುಕೊಂಡಿತು.
ಪಟಾಕಿ ಹೊಡೆಯುವುದನ್ನು ನಿಲ್ಲಿಸಲಾಗಿ ಆನೆ ಗೋಪಾಲಸ್ವಾಮಿ ಸಮಾಧಾನಗೊಂಡನು.
ಈ ಘಟನೆ ನಂತರ ಪುಷ್ಪಾರ್ಚನೆ ಮಾತ್ರ ಮಾಡಿ, ಮೆರವಣಿಗೆ ನಡೆಸದೆ, ಆನೆ ಗೋಪಾಲಸ್ವಾಮಿ ಮೇಲೆ ಹೊರಿಸಲಾಗಿದ್ದ ಮರದ ಅಂಬಾರಿಯನ್ನು ಇಳಿಸಲಾಯಿತು.

