ದೀಪವೆಂದರೆ ಪ್ರಕಾಶ, ಅರಿವು -ಇಳೈ ಆಳ್ವಾರ್ ಸ್ವಾಮೀಜಿ

ಮೈಸೂರು: ನಗರದ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ವಂಗೀಪುರ ನಂಬಿ ಮಠದ ಮೈಸೂರು ಶಾಖೆಯಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ನೇತೃತ್ವದಲ್ಲಿ ನವರಾತ್ರಿಯ ದಸರೆಯ ದೀಪ ಹಾಗೂ ದೀಪ ಪೂಜಾ ಮಹತ್ವ ಕಾರ್ಯಕ್ರಮ ನಡೆಯಿತು.

ನವರಾತ್ರಿ ಆಚರಣೆ ಪರಸ್ಪರರಲ್ಲಿ ಸಂತೋಷ, ಸಮೃದ್ಧಿ, ಸಹನೆ, ಸಂಯಮ, ಸ್ವಾವಲಂಬನೆ, ಸೇವಾ ಮನೋಭಾವ ಬಲಿಷ್ಠಗೊಳಿಸುತ್ತದೆ ಎಂದು ಪರಮಪೂಜ್ಯ ಇಳೆಯಾಳ್ವಾರ್ ಸ್ವಾಮೀಜಿ ಹೇಳಿದರು.

ದೀಪವೆಂದರೆ ಪ್ರಕಾಶ, ಅರಿವು, ಶಾಂತಿ, ಸಮೃದ್ಧಿ, ಆರೋಗ್ಯ, ಸಕಾರಾತ್ಮಕ ಭಾವನೆ ಸೇರಿ ಹಲವು ಅರ್ಥವನ್ನು ದೀಪ ನೀಡುತ್ತದೆ. ಕತ್ತಲು ಲಯ ಭಾವವಾದರೆ, ಬೆಳಕು ಬದುಕಿನ ಗತಿ ಸೂಚಿಸುತ್ತದೆ. ದೀಪದ ತಳಭಾಗ ಬ್ರಹ್ಮ, ಸ್ತಂಭ ವಿಷ್ಣು, ಮೇಲ್ಭಾಗ ಅಂದರೆ ತುಪ್ಪ ಅಥವಾ ಎಣ್ಣೆ ಸುರಿವ ಭಾಗ ಶಿವನನ್ನು ಒಳಗೊಂಡಿದೆ. ಪ್ರಕಾಶಮಾನವಾಗಿ ಬೆಳಗುವ ಪಂಚ ಅಥವಾ ಸಪ್ತ ಬೆಳಕಿನ ಮುಖಗಳು ಪಂಚದೇವಿಯರು ಅಥವಾ ಸಪ್ತ ದೇವಿಯರ ಇರುವಿಕೆ ಸೂಚಿಸುತ್ತದೆ. ಸ್ನೇಹ, ಸೇವೆಯ ನಿರಂತರ ಬೆಳಕು ಸಮಾಜವನ್ನು ಮತ್ತಷ್ಟು ಬಲಪಡಿಸಿದೆ? ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಚಾಮರಾಜ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮಿ, ಬಿಜೆಪಿ ಚಾಮರಾಜ ಯುವಮೋರ್ಚಾ ಅಧ್ಯಕ್ಷ ಸಚಿನ್, ಗೋಪಾಲ್, ಚರಣ್, ಪದ್ಮಾ ರಾಧಾಕೃಷ್ಣ, ವೈದೇಹಿ ಹಾಗೂ ಇನ್ನಿತರರು ಹಾಜರಿದ್ದರು.