‘ಅಭಿನಯ’ದ ಹಿಂದಿನ ‘ಪುರಾಣ’

-ಜಿ.ಆರ್.ಸತ್ಯಲಿಂಗರಾಜು
ನಟ-ನಟಿಯಾಗಬೇಕು ಎಂಬ ಕನಸು ಲಕ್ಷಗಟ್ಟಲೆ ಜನರಿಗೆ ಇರುತ್ತೆ. ಆದರೆ ಇದು ನನಸಾಗುವುದು ಹತ್ತಾರು ಮಂದಿಗೆ ಮಾತ್ರ!
ಭಾಷೆ ಎಂಬುದು ಇಲ್ಲದಿದ್ದಾಗ ಆದಿ ಮಾನವ, ಇನ್ನೊಬ್ಬನಿಗೆ ತಿಳಿಸಲು ‘ಅನುಕರಣೆ/ಅಭಿನಯ’ ಮಾಡುತ್ತಿದ್ದ. ಕಾಲಾಂತರದಲ್ಲಿ ಮಾತು-ಭಾಷೆ ಬಂದು , ಅಭಿನಯ ಕೂಡ ಉಳಿದುಕೊಂಡು ಕಲಾಪ್ರಾಕಾರ ಬೆಳೆಯಿತು.
‘ಅಭಿ’ ಎಂದರೆ ‘ಎದುರು’; ‘ನಯ’ ಎಂದರೆ ‘ವಿನಯ’ ಎಂಬರ್ಥ ಇರುವುದರಿಂದ ‘ಅಭಿನಯ’ ಎಂದರೆ ಎದುರಿನಲ್ಲಿ ನಿವೇದಿಸು, ಅಂದರೆ ಕಲಾವಿದ ತನ್ನ ಒಳಗಿನ ಮಾನವ ಸಹಜ ಅಂತರ್ಮುಖ ವರ್ತನೆಯನ್ನು ಬೇರೆಯವರ ಎದುರು ‘ವಿನಯ’ ದಿಂದ ಬಹಿರ್ಮುಖ ಮಾಡುವುದೇ ‘ಅಭಿನಯ’ದ ಅರ್ಥ.
ಪುರಾಣದ ಹಿನ್ನೆಲೆ
ಅಭಿನಯ ಶಾಸ್ತ್ರ ಐದನೇ ವೇದ, ಇದು ಬ್ರಹ್ಮನಿಂದ ಬಂತು ಎಂಬ ಕತೆ ಇದೆ. ಅದೆಂದರೆ
ದೇವತೆಗಳೆಲ್ಲ ನಾಲ್ಕು ವೇದಗಳಿಗಿಂತ ಭಿನ್ನವಾದ ವೇದ ಕೊಡುವಂತೆ ಬ್ರಹ್ಮನ ಮೊರೆ ಹೋದರು. ಆಗ ಧರ್ಮ, ಅರ್ಥ, ಕಾಮ, ಮೋಕ್ಷ ಕೊಟ್ಟು, ದುಷ್ಕಾರ್ಯ ಕೊನೆಗೊಳಿಸಿ, ಎಲ್ಲರಿಗೂ ಸಂತಸ ನೀಡುವುದಕ್ಕಾಗಿ, ಬ್ರಹ್ಮನು ಋಗ್ವೇದದಿಂದ ಶಬ್ಧ, ಯಜುರ್ವೇದದಿಂದ ಅಭಿನಯ, ಸಾಮವೇದ ದಿಂದ ಗೀತೆ, ಅಥರ್ವಣ ವೇದದಿಂದ ರಸ..ಸಂಗ್ರಹಿಸಿ ಐದನೇ ವೇದವಾಗಿ ‘ನಾಟ್ಯ ವೇದ’ ಸೃಷ್ಟಿಸಿದ.
ಈ ನಾಟ್ಯವೇದವನ್ನ ಭರತಮುನಿಗೆ ಬೋಧಿಸಲಾಯ್ತು. ಈತ ತನ್ನ ಮಕ್ಕಳಿಗೆ ಅದನ್ನ ಬೋಧಿಸಿದ. ಇದಕ್ಕೆ ‘ಭರತ ಶಾಸ್ತ್ರ’ಎಂದೆಸರು.
ಮುಂದೆ ಇದೇ ‘ಅಭಿನಯ ಶಾಸ್ತ್ರ’ಕ್ಕೆ ಮುನ್ನುಡಿಯಾಯ್ತು.
ಅಭಿನಯ/ಭರತ ಶಾಸ್ತ್ರರೂಪುಗೊಂಡಿದ್ದು ಕ್ರಿ.ಶ. ಮೂರು ಅಥವಾ ನಾಲ್ಕನೇ ಶತಮಾನದಲ್ಲಿ ಎಂಬ ವಾದ ಇವೆ, ಒಮ್ಮತ ಇಲ್ಲ.
ಭಾವ(ಭ) ರಸ(ರ) ತಾಳ(ತ) ಎಂಬುದರಿಂದಲೇ ‘ಭರತ ಶಾಸ್ತ್ರ’ ಬಂದಿದೆ ಎಂಬ ವಾದವೂ ಇವೆ.
ಶಾಸ್ತ್ರ ಪುರಾಣ ಏನಾದರೂ ಇರಲಿ, ಅಭಿನಯ ಎಂಬುದು ಅತಿ ಪುರಾನವಾದುದು, ಮನುಷ್ಯನ ಚಿಂತನೆಯನ್ನ ಮತ್ತೊಬ್ಬನಿಗೆ ಅರ್ಥ ಆಗುವಂತೆ ತಿಳಿಸಿಕೊಡುತ್ತಾ ಬಂದಿರುವ, ಸಂವಹನತೆಯ ಕಲಾಪ್ರಾಕಾವಾಗಿದ್ದು, ಆಧುನಿಕ ತಂತ್ರಜ್ಞಾನ ಗಳೊಡನೆ ಮೇಳೈಸಿಕೊಂಡು ‘ಸಿನಿಮಾ ಅಭಿನಯ’ ರೂಪು ಪಡೆದಿದೆ.
ಅಭಿನಯದ ಮೂಲ ಭರತ ಶಾಸ್ತ್ರವಾದರೂ ಇದು ಟಿಸಿಲೊಡೆದು ‘ರಂಗ ಭೂಮಿ’ ಆಯಿತು.
ಸಿನಿಮಾ ನಟನೆಗೆ ಮೂಲ ಆಧಾರ ರಂಗಭೂಮಿ.
ಇಡೀ ಸಿನಿಮ ಚರಿತ್ರೆ, ಅದರಲ್ಲು ಕನ್ನಡ ಸಿನಿಲೋಕ ಅವಲೋಕಿಸಿದರೂ, ಸಿನಿಮಾಗೆ ಭದ್ರ ತಳಪಾಯ ಹಾಕಿದವರೇ ರಂಗಕರ್ಮಿಗಳು.
ನಾಟಕದ ಮಹಾನ್ ಚೇತನಗಳು ‘ಸಿನಿಮಾ’ ಪ್ರಯೋಗಕ್ಕೆ ಕೈ ಹಾಕದಿದ್ದರೆ, ಸಿನಿಮಾ ಇರುತ್ತಿರಲಿಲ್ಲ. ಹೀಗಾಗಿಯೇ ರಂಗಭೂಮಿಯ ಕೊಡುಗೆ ಎಂದಿಗೂ ಚಿರಸ್ಮರಣೀಯ.