ಎಲ್ಲರೊಳಗೊಬ್ಬ ಕಲಾವಿದ!

-ಜಿ.ಆರ್.ಸತ್ಯಲಿಂಗರಾಜು

ಇನ್ನೊಬ್ಬರ ಬಗ್ಗೆ ಮಾಡುವ ಗೇಲಿ, ಹೇಳುವ ಚಾಡಿ, ವ್ಯಕ್ತಪಡಿಸುವ ಕೋಪ…ಇವೆಲ್ಲ ಪ್ರತಿಯೊಬ್ಬರೂ ಪ್ರತಿನಿತ್ಯ ಮಾಡುತ್ತಲೇ ಇರುವಂಥದ್ದು. ಇಲ್ಲೆಲ್ಲ ಅಭಿನಯ ಇದ್ದೇ ಇರುತ್ತೆ. ಹೀಗಾಗಿ ಪ್ರತಿಯೊಬ್ಬನಲ್ಲೂ ಅಭಿನಯ ಅರ್ಥಾತ್ ಕಲಾವಿದ ಇದ್ದೇ ಇದ್ದಾನೆ.
ಇವೆಲ್ಲ ಪರಿಸ್ಥಿತಿ-ವಾಸ್ತವತೆಗೆ ಆಧರಿತವಾಗಿ ವ್ಯಕ್ತವಾಗುವ ಅಭಿನಯ.
ಆದರೆ ಇದ್ಯಾವ ಸ್ಥಿತಿ ಎದುರಿಗೆ ವಾಸ್ತವವಾಗಿ ಇರದಿದ್ದರೂ, ಆ ಸ್ಥಿತಿ ಇದೆ ಎಂದು ತನ್ನೊಳಗೆ ಕಲ್ಪಿಸಿಕೊಂಡು ಅದಕ್ಕೆ ಅನುಗುಣವಾಗಿ, ಕತ್ತಲು-ಬೆಳಕು, ಕ್ಯಾಮರಾ ಮುಂದೆ, ವೇದಿಕೆ ಮೇಲೆ ನಟಿಸುವವನೇ ಕಲಾವಿದ ಆಗಿಬಿಡುತ್ತಾನೆ.
ಪ್ರತಿಯೊಬ್ಬರೂ ವಾಸ್ತವಕ್ಕೆ ಪ್ರತಿಯಾಗಿ ವ್ಯಕ್ತಪಡಿಸುವುದಕ್ಕೂ, ಅಂಥ ಸ್ಥಿತಿ ಇಲ್ಲದಿದ್ದರೂ ಇದೆ ಅಂದುಕೊಂಡು ಪ್ರತಿಕ್ರಿಯೆ ನೀಡುವುದಕ್ಕೂ ವ್ಯತ್ಯಾಸ ಅಜಗಜಾಂತರ.
ಸುತ್ತ ನೂರಾರು ಜನ ಇದ್ದರೂ, ಕಾಡೊಳಗೆ ಹಾದಿ ತಪ್ಪಿದ್ದೇನೆ, ಒಂಟಿಯಾಗಿರುವ ನನ್ನ ಮೇಲೆ ಕಾಡುಪ್ರಾಣಿ ಎರಗಬಹುದು ಎಂಬ ಭಯದಿಂದಲೋ, ಕೆನ್ನೆಗೆ ಬಾಸುಂಡೆ ಬರುವಂತೆ ಹೊಡೆಯದಿದ್ದರೂ, ಹೊಡೆತ ತಿಂದಿರುವಂತೆ ಕಣ್ಣೀರುಗರೆಯುತ್ತಾ, ಕೆನ್ನೆ ಮುಟ್ಡಿಕೊಂಡು ನೋವು ಅನುಭವಿಸುವ ರೀತಿ ಸಹಜತೆಯಿಂದ ನಟಿಸಬಲ್ಲವ ಕಲಾವಿದ ಆಗಿಬಿಡುತ್ತಾನೆ.
ಸಹಜತೆ ಅಭಿನಯದಲ್ಲಿ ಇದ್ದಷ್ಡೂ ಕಲಾವಿದ ಶ್ರೇಷ್ಠನಾಗುತ್ತಾನೆ.
‘ಜಗತ್ತಿನ ಅತಿ ಸುಂದರ ಯುವತಿಯನ್ನ ಪ್ರೀತಿಸುತ್ತಾ, ಆಕೆಗೆ ಹೇಳಬಹುದಾದ ಮಾತುಗಳನ್ನ, ಮೇಜನ್ನುಧ್ದೇಶಿಸಿ ಹೇಳಲಾಗದವನು ನಟನಲ್ಲ, ಯಾವತ್ತಿಗೂ ಶ್ರೇಷ್ಠ ಕಲಾವಿದ ಆಗುವುದಿಲ್ಲ’- ಎಂಬ ಮಾತನ್ನ ಇಂಗ್ಲೆಂಡ್ ನ ಖ್ಯಾತ ನಟ ಡೇವಿಡ್ ಗ್ಯಾರಿಕ್ ಹೇಳಿದ್ದಾನೆ.
‘ತನ್ನ ಪ್ರತಿಭೆ ಬಗ್ಗೆ ತನಗೇ ಗೊತ್ತಿಲ್ಲದೆ, ಮಾಮೂಲಿ ಮನುಷ್ಯನ ಸಮಕ್ಕೆ ನಟಿಸುವುದೇ ನಟನ ಆಸೆ ಆಗಿರಬೇಕು, ಅದನ್ನ ಸಾಧಿಸಲು ತನ್ನೊಳಗೆ ಅನುಭವ ಪಡೆಯುತ್ತಾ ಹೋಗಬೇಕೆ ಹೊರತು, ತಾಂತ್ರಿಕ ದೃಷ್ಟಿಯಿಂದ ಅಭಿನಯಿಸುವವ ಕಲಾವಿದನೇ ಅಲ್ಲ’- ಎಂದು ಫ್ರೆಂಚ್ ನ ಖ್ಯಾತ ನಿರ್ದೇಶಕ ಜೀನ್ ಬೊನಿಯಾಟ್ ಲೆವಿ ಹೇಳಿದ್ದಾನೆ.
ಅವರೆಲ್ಲ ಇರಲಿ ನಮ್ಮ ಮಣ್ಣಿನ ಡಾ.ರಾಜ್ ಎಂತೆಂಥಾ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ, ತನ್ಮಯತೆಯಿಂದ ಅಭಿನಯಿಸಿದ್ದರೂ ‘ ನಾನಿನ್ನೂ ಕಲಿಯುತ್ತಿದ್ದೇನೆ. ಪ್ರತಿ ಪಾತ್ರವೂ ಹೊಸತು’ ಎನ್ನುವ ಜತೆಗೆ ‘ಇನ್ನೂ ಚೆನ್ನಾಗಿ ಅಭಿನಯಿಸಬಹುದಿತ್ತು’ ಎಂಬ ಮನೋ ಇಂಗಿತ ವ್ಯಕ್ತಪಡಿಸಿತ್ತಲೇ ಇದ್ದರು. ಅಭಿನಯಕ್ಕೊಂದು ವಿಶ್ವವಿದ್ಯಾಲಯ ರೀತಿ ಇದ್ದ ರಾಜ್ ರಿಗೆ ಕೊನೇವರೆಗೂ ಶ್ರೇಷ್ಠ ಅಭಿನಯ ನೀಡಬೇಕೆಂಬ ತವಕ ಇದ್ದೇ ಇತ್ತು
ಇವೆಲ್ಲ ಗಮನಿಸಿದರೆ ಸೂಕ್ಷ್ಮ ಭಾವನೆ ಅಭಿನಯಗಾರನಿಗೆ ಇರಲೇಬೇಕು. ಭಾವನೆ-ಕಲ್ಪನೆ, ಅವಲೋಕಿಸುವ ಮನಸ್ಸು, ವೀಕ್ಷಿಸುವ ಗುಣ, ಕಲಿಯಬೇಕು, ಕಲಿಯುವುದು ಇನ್ನೂ ಇದೆ ಎಂಬ ಇಂಗಿತ ಯಾರೊಳಗೆ ಜೀವಂತ ಇರುವುದೋ ಅವರು ಶ್ರೇಷ್ಠ ಕಲಾವಿದ ಆಗಬಲ್ಲರು. ಇದಾವುದೂ ಇಲ್ಲದೆ, ಯಾಂತ್ರಿಕವಾಗಿ ನಟಿಸುವವನು ನಟ ಎನಿಸಿಕೊಳ್ಳಬಹುದೇ ಹೊರತು ಅಭಿಜಾತ ಕಲಾವಿದ ಎನಿಸಿಕೊಳ್ಳಲು ಆಗಲ್ಲ.