ನಾಟಕವೇ ‘ಸಿನಿಮಾ’ ಅಡಿಪಾಯ

-ಜಿ.ಆರ್.,ಸತ್ಯಲಿಂಗರಾಜು
ಕ್ಯಾಮರಾ, ಆಧುನಿಕ ತಂತ್ರಜ್ಞಾನದಿಂದ ಸಿನಿಮಾ ಪ್ರಚಂಡವಾಗಿ ಬೆಳೆಯುತ್ತಿದೆ. ಇದರ ಹೊಡೆತ ನಾಟಕದ ಮೇಲಾಗಿದೆಯಾದರೂ,
ಮೂಲತಃ ಸಿನಿಮಾದ ತಾಯಿಬೇರು ನಾಟಕ ಎಂಬುದನ್ನ ಮರೆಯುವಂತಿಲ್ಲ.
ರಂಗಭೂಮಿ ಮತ್ತು ಸಿನಿಮಾ ನಟನೆಯಲ್ಲಿ ವ್ಯತ್ಯಾಸ ಇದ್ದೇ ಇದೆ. ಅವೆಂದರೆ ಆಕಾಶವಾಣಿ ಯಲ್ಲಿ ಕಲಾವಿದರು, ನಿರೂಪಕರ ಧ್ವನಿ ಕೇಳುತ್ತೆ ಹೊರತು ಅವರ ಹಾವಭಾವ ಅಭಿನಯ ಗೊತ್ತಾಗಲ್ಲ.
ಸಿನಿಮಾ ನಾಟಕ ಧಾರಾವಾಹಿ ಗಳಲ್ಲಿ ಮಾತು ಕೇಳಿಸುತ್ತೆ ಜತೆಗೆ ಅಭಿನಯ ಕಾಣಿಸುತ್ತೆ.
ಸಿನಿಮಾ ರೂಪುಗೊಂಡ ಆರಂಭದ ದಿನಗಳಲ್ಲಿ ಕತೆ, ಅಭಿನಯ ನಾಟಕದ್ದೇ ರೀತಿ ಇತ್ತು.
ಇವಾಗ ಕೂಡ ಚಿತ್ರನಾಟಕ/ಚಿತ್ರಕತೆ(ಸ್ಕ್ರೀನ್ ಪ್ಲೇ) ಬರೆದುಕೊಂಡೇ ಸಿನಿಮಾ ತೆಗೆಯಬೇಕು! ಹೀಗಾಗಿ ಇವತ್ತಿಗೂ ಸಿನಿಮಾದ ತಳಹದಿ ನಾಟಕವೇ ಆಗಿದೆ.
ನಾಟಕದಲ್ಲಿ ದೃಶ್ಯ ಗಳು ಅನುಕ್ರಮವಾಗಿ ಇರುತ್ತವೆ. ಸಿನಿಮಾದ ದೃಶ್ಯಗಳನ್ನಾನುಕ್ರಮವಾಗಿ ತೆಗೆಯಲ್ಲ, ಬದಲಿಗೆ ಸಂಕಲನ(ಎಡಿಟಿಂಗ್) ನಲ್ಲಿ ಅನುಕ್ರಮವಾಗಿ ಜೋಡಿಸಲಾಗುತ್ತೆ.
ನಾಟಕ ಪ್ರೇಕ್ಷಕರ ಎದುರೇ ನಡೆವುದರಿಂದ ನಟ-ಪ್ರೇಕ್ಷಕನ ನಡುವೆ ನೇರ ಸಂಬಂಧ ಇರುತ್ತೆ, ಅಭಿನಯಕ್ಕೆ ಪ್ರತಿಕ್ರಿಯೆ ಅಲ್ಲಲ್ಲೇ ಬಂದುಬಿಡುತ್ತೆ. ನಾಟಕ ಕಲಾವಿದ ಪ್ರೇಕ್ಷಕನ ಮೇಲೆ ಪರಿಣಾಮ ಬೀರಿ, ಒಂದು ಪ್ರದರ್ಶನ ದಲ್ಲಿ ಆಗಿದ್ದ ತಪ್ಪು ಇನ್ನೊಂದು ಪ್ರದರ್ಶನದಲ್ಲಿ ಸರಿ ಮಾಡಿಕೊಳ್ಳಬಹುದು.
ಸಿನಿಮ ನಟ ಮತ್ತು ಪ್ರೇಕ್ಷಕನ ನಡುವೆ ನೇರ ಸಂಬಂಧ ಇಲ್ಲ, ಕ್ಯಾಮರಾ ಎಂಬ ಅಡ್ಡಗೋಡೆ ಇದೆ. ಪ್ರೇಕ್ಷಕನ ನೇರಾನೇರ ಪ್ರತಿಕ್ರಿಯೆ ಸಿಗಲ್ಲ, ಆಗಿದ್ದ ತಪ್ಪನ್ನ ಅದೇ ಸಿನಿಮಾದಲ್ಲಿ ಸರಿ ಮಾಡಿಕೊಳ್ಳಲು ಅಸಾಧ್ಯ.
ನಾಟಕನ ನಟ ಸ್ವತಂತ್ರ. ವೇದಿಕೆ ಮೇಲೆ ಓಡಾಡುತ್ತಾ ತನ್ನ ಅಭಿನಯ ಚಾತುರ್ಯ ತೋರಿಸಬಹುದು. ಸಿನಿಮಾ ನಟನಿಗೆ, ಲೈಟಿಂಗ್, ಕ್ಯಾಮರಾಗಳ ಇತಿಮಿತಿಯೊಳಗೇ ನಟಿಸಬೇಕು, ಹೀಗಾಗಿ ಒಂದು ಪರಿಧಿ ಅಥವಾ ಬೇಲಿ ಇರುತ್ತೆ.
ನಾಟಕದ ದೃಶ್ಯ ಗಳು ಅನುಕ್ರಮವಾದ್ದರಿಂದ ನಟನೆ ಸುಲಭ, ಆದರೆ ಒಂದು ದೃಶ್ಯದ ಒಂದು ಶಾಟ್ ಈಗ ತೆಗೆದು, ಮತ್ತಷ್ಟನ್ನ ಯಾವಾಗಲೋ‌ ತೆಗೆಯುವುದರಿಂದ, ಸಿನಿಮಾ ಕಲಾವಿದನಿಗೆ, ಹಿಂದೆ ಏನು ನಟಿಸಿದ್ದೆ, ಮುಂದೆ ಏನು ನಟಿಸಬೇಕು, ಹಾವಭಾವ ಭಂಗಿಯನ್ನ ನೆನಪಿಟ್ಟಿರಲೇಬೇಕಾಗುತ್ತೆ.
ನಾಟಕದ ನಟನ ಮುಖಭಾವ ಪ್ರೇಕ್ಷಕರೆಲ್ಲರಿಗೂ ಕಾಣಿಸಲ್ಲ, ಹೀಗಾಗಿ ಕೈಕಾಲು ಆಡಿಸಿವುದನ್ನ ಜಾಸ್ತಿ ಮಾಡಬೇಕು. ಗುಟ್ಟಿನ ಮಾತನ್ನ ಕೂಡ ಜೋರಾಗಿ ಅರಚಿಕೊಂಡೇ ಹೇಳಬೇಕು.
ಸಿನಿಮಾ ನಟನ ಮುಖಭಾವ ಕ್ಯಾಮರಾ ಮೂಲಕ ಸಮಸ್ತ ನೋಡುಗರಿಗೂ ಕಾಣಿಸುತ್ತೆ, ಪಿಸು ಮಾತನ್ನ, ದೂರಕ್ಕೆ ಕರೆದೊಯ್ದು ಹೇಳುವ ತಂತ್ರಜ್ಞಾನ ಬಳಸಬಹುದು. ಹೀಗಾಗಿ ನಾಟಕದವರಂತೆ ಕೈಕಾಲು ಹೆಚ್ಚಾಗಿ ಆಡಿಸುವ ಅಗತ್ಯ ಇರಲ್ಲ.
ರಂಗಸ್ಥಳದ ಮೇಲೇ ಕಲಾವಿದ ಅಭಿನಯಿಸಬೇಕು, ಸಿನಿಮಾ ನಟ ಎಲ್ಲಾದರೂ ಅಭಿನಯಿಸಬಹುದು ಕ್ಯಾಮರಾ ಅವನನ್ನ ಹಿಂಬಾಲಿಸುತ್ತೆ.
ಸಿನಿಮಾ ನಟನೆದುರು ಪ್ರೇಕ್ಷಕ ಇರಲ್ಲ, ಆದರೂ ಅವರಿದ್ದಾರೆ ಎಂದುಕೊಂಡೇ, ಸಹ ಪಾತ್ರಧಾರಿಗಳನ್ನ ಗಮನದಲ್ಲಿಟ್ಟುಕೊಂಡು ನಟಿಸಬೇಕು. ಇಲ್ಲಿ ಕ್ಯಾಮರಾ ಇದೆ ಎಂಬ ಆತಂಕ ನಟನಿಗೆ ಇರಬಾರದು, ಕ್ಯಾಮರಾ ಇಲ್ಲ ಎಂದೇ ನಟಿಸಬೇಕು ‌ ಆದರೆ ಕ್ಯಾಮರಾ ಲೆನ್ಸ್ ಪರದೆ ಮೇಲೆ ನನ್ನನ್ನ ದೊಡ್ಡದಾಗಿ ತೋರಿಸುತ್ತೆ ಎಂಬ ಪ್ರಜ್ಞೆ ಇಟ್ಟುಕೊಂಡೇ, ತುಂಡು ತುಂಡಾಗಿ ಸಿನಿಮ ಕಲಾವಿದ ಅಭಿನಯಿಸಬೇಕಾಗುತ್ತೆ.
ಪ್ರೇಕ್ಷಕರೆದುರು ನೇರಾನೇರ ಅಭಿನಯಿಸುವುದಿಲ್ಲವಾದ್ದರಿಂದ ಸಿನಿಮಾ ಕಲಾವಿದ, ಹೆಚ್ಚು ಜನರಿದ್ದೆಡೆ ಸಹಜವಾಗಿ ಅಭಿನಯಿಸಲು ಆಗದಿರಬಹುದು. ನಾಟಕ ಕಲಾವಿದನಿಗೆ ಕ್ಯಾಮರಾ, ಲೈಟಿಂಗ್ ಗಳು ಸಿನಿಮಾದಲ್ಲಿ ತೊಡಕು ಆಗಬಹುದು.
ಇಂಥವೇ ವ್ಯತ್ಯಾಸ ಪಟ್ಟಿ ಮಾಡಬಹುದಾದರೂ, ರಂಗಸ್ಥಳದ ಅನುಭವ ಇದ್ದವರು ಸಿನಿಮಾದಲ್ಲಿ ಗಟ್ಟಿಯಾಗಿ ಛಾಪು ಮೂಡಿಸಿದ್ದಾರೆ ಎಂಬುದಕ್ಕೆ ಡಾ.ರಾಜ್ ಅವರಿಗಿಂತ ಮತ್ತೊಂದು ನಿದರ್ಶನ ಅನಗತ್ಯ.