ಸಿನಿಮ ಆಕ್ಟಿಂಗ್

-ಜಿ.ಆರ್.ಸತ್ಯಲಿಂಗರಾಜು
ಸಿನಿಮಾ ಶುರುವಾದಾಗಿಂದಲೇ ಸಿನಿಮಾ ಕಲಾವಿದರೂ ರೂಪುಗೊಂಡಿದ್ದರು. ಆರಂಭದಲ್ಲಿ ನೈಜವಾಗಿನ ಆಗುಹೋಗನ್ನೇ ಚಿತ್ರಿಸಲಾಗುತ್ತಿತ್ತೇ ಹೊರತು, ಚಿತ್ರಿಸುವುದಕ್ಕಾಗಿ ಪಾತ್ರಧಾರಿಗಳನ್ನ ಕರೆತರುತ್ತಿರಲಿಲ್ಲ.
ಪ್ರಥಮವಾಗಿ ಪಾತ್ರಕ್ಕೆ ತಕ್ಕ ಕಲಾವಿದರನ್ನ ಹಾಕಿಕೊಂಡಿದ್ದು ಗ್ರಿಫಿತ್.
ಮಾತು ಇಲ್ಲದಿದ್ದಾಗಲೂ ಕಲಾವಿದರ ಮೂಲಕ ಕತೆ ಅರ್ಥ ಆಗುವಂತೆ ಮಾಡಲ್ಪಡುತ್ತಿತ್ತು. ಆಗೆಲ್ಲ ಸಹಜತೆಗೆ ವಿರೋಧವಾದರೂ ಅಂಗವಿನ್ಯಾಸ, ಕರವಿನ್ಯಾಸಕ್ಕೇ ಹೆಚ್ಚು ಒತ್ತು ಕೊಡಬೇಕಿತ್ತು.
ಮೂಕಿ ಫಿಲಂಗಳ ನಕ್ಷತ್ರಗಳು ಎನಿಸಿಕೊಂಡಿರುವ ಚಾರ್ಲಿಚಾಪ್ಲಿನ್, ಡ್ಲಗಾಸ್ ಫೇರ್ ಬ್ಯಾಂಕ್ಸ್, ಮೇರಿ ಫಿಕ್ ಪರ್ಡ್,ವಿಲುಮೊರಿಯಾ, ಗೋಹರ್, ಹಿಂದಿಯ ರಾಜಾಸ್ಯಾಂಡೋ, ಸುಲೋಚನ..ಇವರೆಲ್ಲರ ಅಭಿನಯ ಕೂಡ ಸಹಜತೆಗಿಂತ ಅಧಿಕವಾಗಿತ್ತು.
ಮಾತು ಸೇರ್ಪಡೆಗೊಂಡ ನಂತರವೂ ನಾಟಕದ ಪ್ರಭಾವ ಸಿನಿಮಾದಲ್ಲಿ ಇತ್ತು. ೧೦೨೦-೧೯೩೦ ರವರೆಗೂ ಅಭಿನಯ ಉತ್ಪ್ರೇಕ್ಷೆ ಯದೇ ಆಗಿತ್ತು. ಸಹಜ ಅಭಿನಯ ಮುನ್ನೆಲೆಗೆ ಬಂದಿದ್ದು ೧೯೨೦-೪೦ ರ ದಶಕಗಳಲ್ಲಿ.
ಪಾಲ್ ಮುನಿ, ಚಾರ್ಲ್ ಲಾಪ್ಟನ್, ಸ್ಪೆನ್ಸರ್ ಟ್ರೇಸಿ, ರೊನಾಲ್ಡ್ ಕೊಲ್ಮನ್, ಬೆಟ್ಟಿಡೇವಿಸ್, ಕ್ಲಾರ್ಕ್ ಗೇಬಲ್ ಇವರೆಲ್ಲರ ಅಭಿನಯ ಹೆಸರಾಗಿತ್ತು. ವಿಶೇಷ ಎಂದರೆ ಇವರು ತಮ್ಮದೇ ಆದ ಅಂಗಚೇಷ್ಟೆ, ಕರವಿನ್ಯಾಸ ರೂಢಿಸಿಕೊಂಡಿದ್ದರು, ಅದೇ ಅವರ ಹೆಗ್ಗುರುತು ಆಗಿತ್ತು.
ಗೇಬಿಯಲ್ ನ ಮುಗುಳುನಗೆ, ಟ್ರೇಸಿಯ ತಗ್ಗಿದ ತಲೆ, ಡೇವಿಸ್ ನ ಅಂದವಾದ ಕೈ ಆಗಿನ ಕಾಲದಲ್ಲಿ ಹೆಸರಾಗಿತ್ತು. ಈ ನಟರು ಬೇರೆಬೇರೆ ಸಿನಿಮಾ ದಲ್ಲಿ ನಟಿಸಿದರೂ ಅಭಿನಯದಲ್ಲಿ ಮ್ಯಾನರಿಸಂ ಏಕತಾನತೆ ಇತ್ತು.
ಮ್ಯಾನರಿಸಂ ಗಳೇ ಹೆಚ್ಚು ಇರುತ್ತಿತ್ತು ಏಕೆ? ಎಂಬುದಕ್ಕೆ ಉತ್ತರ, ಆಗಿನ್ನೂ ಕ್ಯಾಮರಾ ಚಲನೆ ತಂತ್ರ ಅಭಿವೃದ್ಧಿ ಆಗಿರಲಿಲ್ಲ. ದೂರದಿಂದ ಅಭಿನಯಿಸಬೇಕಿದ್ದರಿಂದ, ಮ್ಯಾನರಿಸಂ ಅನಿವಾರ್ಯ ಆಗಿತ್ತು.
ಶಾಟ್ ಮತ್ತು ಶಬ್ಧಗ್ರಹಣ ಸೇರ್ಪಡೆಗೊಂಡ ನಂತರ, ಅಭಿನಯ ಕಲೆ ಸೂಕ್ಷ್ಮತೆ ಗಳಿಸಿಕೊಂಡು, ಅಬ್ಬರದಿಂದ ಮಾತಾಡುವುದು ನಿಂತು, ಸಹಜವಾಗಿ ಸಂಭಾಷಣೆ ಉಚ್ಚರಿಸುವುದು ಶುರುವಾಯಿತು.
ಒಬ್ಬ ಇನ್ನೊಬ್ಬ ಪಾತ್ರಧಾರಿ ಜತೆ ಸಹಜವಾಗಿ ಮಾತಾಡುವ ರೀತಿಯಲ್ಲಿ ಅಭಿನಯಿಸುವುದು ಬಂದಿದ್ದರಿಂದ, ಮ್ಯಾನರಿಸಂ ಆರ್ಭಟ ಕಡಿಮೆಯಾಯಿತು.
ಎರಡನೇ ವಿಶ್ವ ಯುದ್ಧದ ನಂತರ, ಸಿನಿಮಾ ಮತ್ತು ನಾಟಕ ಅಭಿನಯದ ನಡುವೆ ಪ್ರತ್ಯೇಕತೆ ಆಗಿ, ಸಿನಿಮಾ ನಟನೆ ಶ್ರೇಷ್ಠ ಎನಿಸಿಕೊಂಡಿತು. ಇದಕ್ಕೆ ೧೯೫೦ ರಲ್ಲಿ ರಂಗಭೂಮಿಯಿಂದ ಸಿನಿಮಾ ಗೆ ಕಾಲಿರಿಸಿದ ಮೈಕೆಲ್ ರೆಡ್ ಗ್ರೇವ್, ಆಲೆಗ್, ಗಿನೀಸ್, ಜೇಮ್ಸ್ ಮೇಸಸ್ ಮುಖ್ಯ ಕಾರಣರು.
ಇದೇ ವೇಳೆಗೆ ಫ್ರೆಂಚ್ , ಇಟಲಿಯ ನಿರ್ದೇಶಕರು ನಾಟಕೀಯತೆ ಕಡಿಮೆಗೊಳಿಸಿ, ಸಹಜತೆಗೆ ಆದ್ಯತೆ ಕೊಟ್ಟು ‘ ಸ್ಕ್ರೀನ್ ಪರ್ಸನಾಲಿಟಿ’ ಎಂಬುದಕ್ಕೆ ಮನ್ನಣೆ ಕೊಟ್ಟರು. ಅಮೆರಿಕ ಹೊರತಾಗಿಸಿ,ಉಳಿದ ಸಿನಿಮಾ ಕ್ಷೇತ್ರಗಳಲ್ಲಿ ನಟನನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪರಿಣಾಮವಾಗಿ ಪ್ರೇಕ್ಷಕರು, ನಟನ ವ್ಯಕ್ತಿತ್ವ ಮರೆತು ಅವನ ಪಾತ್ರವನ್ನಷ್ಟೇ ನೋಡಲಾರಂಭಿಸಿದರು.
ಪಾತ್ರಧಾರಿ ಗಮನದಲ್ಲಿಟ್ಟುಕೊಂಡು ಪಾತ್ರ ಸೃಷ್ಟಿಸುವ,’ಸ್ಟಾರ್ ಸಿಸ್ಟಮ್’ ಬಂತು.
ಇವೆಲ್ಲದರ ಒಟ್ಟು ಪರಿಣಾಮವಾಗಿ, ಪ್ರೇಕ್ಷಕರು ಸಿನಿಮಾ-ನಾಟಕ ಅಭಿನಯದ ವ್ಯತ್ಯಾಸ ಕಂಡುಕೊಂಡಿದ್ದಾರೆ. ಸಿನಿಮಾ ಅಬ್ಬರದಲ್ಲಿ, ನಾಟಕ ಮೊದಲಿದ್ದಷ್ಟು ಪ್ರಖರತೆ ಕಳೆದುಕೊಂಡಿದೆ.