ಪ್ರಜ್ವಲ್‌ ವಿಡಿಯೊ ಪ್ರಕರಣ; ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸಲ್ಲ: ಶಾ

ಗುವಾಹಟಿ: ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸಲ್ಲ,ನಾವು ದೇಶದ ಮಾತೃಶಕ್ತಿ ಜೊತೆ ನಿಲ್ಲುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಗುವಾಹಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ಇದೊಂದು ಬಹಳ ಆಘಾತಕಾರಿ ಘಟನೆಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಡಕ್ಕಾಗಿ ಹೇಳಿದರು.

ನಾವು ದೇಶದ ಮಾತೃಶಕ್ತಿ ಜೊತೆ ನಿಲ್ಲುತ್ತೇವೆ, ಈ ವಿಚಾರದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ, ನಾನು ಕಾಂಗ್ರೆಸ್  ಸರ್ಕಾರವನ್ನು ಕೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಯಾರ ಸರ್ಕಾರವಿದೆ? ಅವರು ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ  ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ನಾವು ತನಿಖೆಯ ಪರವಾಗಿದ್ದೇವೆ, ತನಿಖೆ ನಡೆಯಲಿ. ಇದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ, ಹೀಗಾಗಿ ನಾವು ಈ ಬಗ್ಗೆ ಕ್ರಮ ಕೈಗೊಳ್ಳಲು ಆಗಲ್ಲ, ನಮ್ಮ ಮೈತ್ರಿ ಪಕ್ಷ ಜೆಡಿಎಸ್ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.ಈ ದಿನವೆ ಅವರ ಕೋರ್ ಕಮಿಟಿ ಸಭೆ ಇದ್ದು, ಕ್ರಮಕೈಗೊಳ್ಳಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.