ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ: ಎಸ್ಐಟಿ ಯಿಂದ ಪೆನ್‌ಡ್ರೈವ್‍ ವಶ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್ ಡ್ರೈವ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

32 ಜಿಬಿ ಮತ್ತು 8 ಜಿಬಿ ಎರಡು ಪೆನ್ ಡ್ರೈವ್‍ಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಈ ಎರಡು ಪೆನ್‍ಡ್ರೈವ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗುತ್ತಿದ್ದು, ತಾಂತ್ರಿಕ ಸಾಕ್ಷ್ಯ ಕಲೆಹಾಕಲು ತಯಾರಿ ನಡೆಸುತ್ತಿದ್ದಾರೆ.

ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದು, ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ), 354 (ಡಿ) (ಮಹಿಳೆಗೆ ಮುಜುಗರ ಆಗುವಂತೆ ಹಿಂಬಾಲಿಸುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ ಉಂಟುಮಾಡುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಎಸ್‍ಐಟಿ ತನಿಖೆಯಲ್ಲಿ ಬೆಂಗಳೂರಿನ ಎಡಿಜಿಪಿ ಬಿಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತಂಡ ತನಿಖೆ ನಡೆಸುತ್ತಿದೆ.