ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಮೋದಿ ವಾಗ್ದಾಳಿ

ಜೈಪುರ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದು ಅಪರಾಧವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ಟೋಕ್‌ನಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಹನುಮ ಜಯಂತಿ ಆಚರಿಸಲಾಗುತ್ತದೆ,ಇಂದು ಹನುಮ ಜಯಂತಿಯಂದು ನಿಮ್ಮೊಂದಿಗೆ ಮಾತನಾಡುವಾಗ ಕೆಲ ಹಿಂದಿನ ಘಟನೆಗಳು ನೆನಪಿಗೆ ಬರುತ್ತಿದೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಅಂಗಡಿಯಲ್ಲಿ ಕುಳಿತು ಹನುಮಾನ್ ಚಾಲೀಸಾ ಕೇಳುತ್ತಿದ್ದ ಎಂಬ ಕಾರಣಕ್ಕೆ ಅಂಗಡಿಯವನಿಗೆ ಕ್ರೂರವಾಗಿ ಥಳಿಸಲಾಗಿತ್ತು ಎಂದು ಕಿಡಿಕಾರಿದರು.

ಈ ಬಾರಿ ರಾಮನವಮಿಯಂದು ಮೊದಲ ಬಾರಿಗೆ, ರಾಜಸ್ಥಾನದಲ್ಲಿ ಶೋಭಾಯಾತ್ರೆ ಮೆರವಣಿಗೆ ನಡೆಸಲಾಯಿತು. ರಾಜಸ್ಥಾನದಂತಹ ರಾಜ್ಯದಲ್ಲಿ ಅಲ್ಲಿ ಜನರು ರಾಮ-ರಾಮ ಎಂದು ಜಪಿಸುತ್ತಾರೆ ಎಂದು ಹೇಳಿದರು.

ರಾಜಸ್ಥಾನದಲ್ಲಿ ನಾನು ಸಂಪತ್ತಿನ ಮರು ಹಂಚಿಕೆಯ ಕೆಲವು ಸತ್ಯವನ್ನು ದೇಶದ ಮುಂದೆ ಮಂಡಿಸಿದೆ, ಈ ಭಾಷಣದ ಬಳಿಕ ಇಡೀ ಕಾಂಗ್ರೆಸ್ ಮತ್ತು ಐ ಎನ್ ಡಿ ಐ ಎ ಮೈತ್ರಿಕೂಟ ತಲ್ಲಣಗೊಂಡಿದೆ.

ನಿಮ್ಮ ಆಸ್ತಿಯನ್ನು ಕಿತ್ತುಕೊಂಡು ಅದನ್ನು ತಮ್ಮ ವಿಶೇಷ ಜನರಿಗೆ ಹಂಚಲು ಕಾಂಗ್ರೆಸ್ ಸಂಚು ಮಾಡುತ್ತಿದೆ ಎಂಬ ಸತ್ಯವನ್ನು ನಾನು ಮಂಡಿಸಿದೆ. ನಾನು ಅವರ ರಾಜಕೀಯವನ್ನು ಬಯಲಿಗೆಳೆದಾಗ ಅವರು ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಸತ್ಯಕ್ಕೆ ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವು ದೇಶದ ಸಂವಿಧಾನದೊಂದಿಗೆ ಆಟವಾಡಿದೆ. ಸಂವಿಧಾನ ರಚನೆಯಾದಾಗ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಜಾತಿಗಳ ರಕ್ಷಣೆಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ವಿರೋಧಿಸಲಾಯಿತು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ತಮ್ಮ ಭಾಷಣದಲ್ಲಿ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಇದೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಆಲೋಚನೆ ಯಾವಾಗಲೂ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

2004 ಮತ್ತು 2010 ರ ನಡುವೆ, ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಕಾಂಗ್ರೆಸ್ ನಾಲ್ಕು ಬಾರಿ ಪ್ರಯತ್ನಿಸಿತು. ಆದರೆ ಕಾನೂನು ಅಡೆತಡೆಗಳು ಮತ್ತು ಸುಪ್ರೀಂ ಕೋರ್ಟ್‌ನ ಜಾಗೃತಿಯಿಂದಾಗಿ ಅವರು ಅವರ ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ.

2011ರಲ್ಲಿ ಕಾಂಗ್ರೆಸ್ ಇದನ್ನು ದೇಶಾದ್ಯಂತ ಜಾರಿಗೆ ತರಲು ಪ್ರಯತ್ನಿಸಿತು. ಎಸ್‌ಸಿ,ಎಸ್‌ಟಿ ಮತ್ತು ಒಬಿಸಿಯವರಿಗೆ ನೀಡಿದ್ದ ಹಕ್ಕುಗಳನ್ನು ಕಿತ್ತುಕೊಂಡು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇತರರಿಗೆ ನೀಡಿದ್ದಾರೆ. ಇದೆಲ್ಲ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ ಎಂದು ಗೊತ್ತಿದ್ದೇ ಕಾಂಗ್ರೆಸ್ ಈ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಮೋದಿ ಕಿಡಿಕಾರಿದರು.