ಮನುಕುಲದ ಒಳಿತಿಗಾಗಿ ಯೋಗ

ಡಾ.ಗುರುಪ್ರಸಾದ  ರಾವ್ ಹವಾಲ್ದಾರ್ ಮರಿಯಮ್ಮನ ಹಳ್ಳಿ

dr.guruhs@gmail.com

ವಿಶ್ವಾದ್ಯಂತ ಇಂದು 9ನೇ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ,ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದ್ದು, ಸಾವಿರಾರು ವರ್ಷಗಳಿಂದಲೂ  ಜೀವನದ ಭಾಗವಾಗಿ ಪ್ರತಿನಿತ್ಯ ಅಚರಿಸಿಕೊಂಡು ಬರಲಾಗಿದೆ.ಜಗತ್ತಿನಾದ್ಯಂತ 170ಕ್ಕೂ ಹೆಚ್ಚು ರಾಷ್ಟ್ರಗಳ ನಾಗರಿಕರು ಯೋಗವನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಆಚಾರಿಸುತ್ತಾ ಅನೇಕ ಮಾನಸಿಕ ದೈಹಿಕ ಆರೋಗ್ಯವನ್ನು ಸದೃಡಗೊಳಿಸಿಕೊಂಡಿದ್ದಾರೆ.

ಯೋಗದ ಮೂಲ  ಎಲ್ಲಿ ಎಂದೂ ನೋಡುತ್ತಾ ಹೋದರೆ ಭಗವಾನ್ ಶಿವನಲ್ಲಿ ಕಂಡುಬರುತ್ತದೆ , ಶಿವ ಭಾರತೀಯರ ಆರಾಧ್ಯ ದೈವನಾಗಿದ್ದು, ಈತನನ್ನು  ‘ಆದಿ ಯೋಗಿ’ ಅಥವಾ  ಯೋಗದ ಮೊದಲ ಗುರು ಎಂದು ಕರೆಯಲಾಗುತ್ತದೆ,  ಪುರಾತನ ಕಾಲದಿಂದಲೂ ಈ ನಂಬಿಕೆಯಾಗಿದೆ ಶಿವನು   ಈ ದಿನ( ಜೂನ್ 21)ದಂದು  ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿದನೆಂದು ಹೇಳಲಾಗಿದೆ, ಹಾಗಾಗಿ ಯೋಗದ ಆದಿ ಗುರು ಆಗಿದ್ದಾನೆ.ಆದಾಗ್ಯೂ ಇಂದು ದಿನನಿತ್ಯ ಯೋಗ ಅಭ್ಯಾಸಿಸುವ ಅವಶ್ಯಕತೆಯನ್ನು ವಿಶ್ವಕ್ಕೆ ಸಾರಿದ್ದು ಭಾರತೀಯರು.

‘ಯೋಗ’ ಎನ್ನುವ ಶಬ್ದದ ಉಗಮ ಸಂಸ್ಕೃತದ “ಯುಜ್”ನಿಂದ ಆಗಿದೆ. “ಯುಜ್” ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ಪತಂಜಲಿ ಮಹರ್ಷಿಗಳ ಪ್ರಕಾರ ‘ಯೋಗಃಚಿತ್ತವೃತ್ತಿ ನಿರೋಧಃ’ ಯೋಗವೆಂದರೆ ಮನಸ್ಸಿನ ಚಂಚಲ ವೃತ್ತಿಗಳನ್ನು ನಿರೋಧಿಸುವುದು.” ವಸಿಷ್ಠ ಮಹರ್ಷಿಗಳು “ಮನಃ ಪ್ರಶಮನೋಪಾಯಃ ಯೋಗಃ ಇತಿ ಅಭಿಧೀಯತೆ” ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗವೆಂದು ಹೇಳಿದ್ದಾರೆ.

“ಯೋಗಃ ಸಮತ್ವಂ ಉಚ್ಚತೇ’ ಯೋಗವೆಂದರೆ ಕಾರ್ಯವ್ಯವಹಾರದಲ್ಲಿ ಸಮಭಾವ, ಸಮಚಿತ್ತವಾಗಿರುವುದು. ಸ್ತುತಿ-ನಿಂದನೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಇತರೆ ಪರಿಸ್ಥಿತಿಗಳಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.

ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ.ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಯೋಗವೆಂದರೆ ಕೆಲವರು ಪ್ರಾಣಾಯಾಮ ಅಥವಾ ಯೋಗಾಸನವೆಂದು ತಿಳಿದಿದ್ದಾರೆ. ಆದರೆ ಯೋಗವು ಆತ್ಮನ ಚಂಚಲ ಮನಸ್ಸನ್ನು ಏಕಾಗ್ರಗೊಳಿಸಬಲ್ಲ ಮನೋವ್ಯಾಯಾಮವಾಗಿದೆ.  ಯೋಗವೆಂದರೆ ಸರ್ವ ಮನೋವೃತ್ತಿಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು.

ಅಂತರಾಷ್ಟ್ರೀಯ ಯೋಗ ದಿನ : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ್ಯಾಂತ ವರ್ಷಂಪ್ರತಿ ಆಚರಿಸಲಾಗುತ್ತದೆ. ಕೇಂದ್ರ ಸರ್ಕಾರದ ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು.

 2015ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಯೋಗವನ್ನು ದೊಡ್ಡದಾಗಿ ಆಚರಿಸಲಾಗುತ್ತಿದೆ. ಬಾಂಗ್ಲಾದೇಶ, ಟರ್ಕಿ, ಇರಾನ್, ಇಂಡೋನೇಷಿಯಾ, ಯುನೈಟೆಡ್​ ಅರಬ್​ ಎಮಿರೇಟ್ಸ್​, ಕತಾರ್ ಮತ್ತು ಓಮನ್ ಸೇರಿ 46 ಮುಸ್ಲಿಂ ದೇಶಗಳು ಕೂಡ 2015ರಲ್ಲಿಯೇ ಯೋಗವನ್ನು ಒಪ್ಪಿಕೊಂಡು, ಆಚರಿಸಿದ್ದವು.

2017ರಲ್ಲಿ ಸೌದಿ ಅರೇಬಿಯಾ ಕೂಡ ಅಪ್ಪಿಕೊಂಡಿತು. ಇನ್ನು ಅಮೆರಿಕ, ಕೆನಡಾ, ಸಿಂಗಾಪುರ, ಚೀನಾ, ಜಪಾನ್ ಮತ್ತಿತರ ರಾಷ್ಟ್ರಗಳಲ್ಲಿ ಕೂಡ ಯೋಗ ದಿನಾಚರಣೆಯನ್ನು ಅತ್ಯುತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಬರೀ ಜೂ.21ರ ಯೋಗ ದಿನಾಚರಣೆ ದಿನವಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಅಲ್ಲೆಲ್ಲ ಯೋಗ್ಯಾಭ್ಯಾಸ ನಡೆಯುತ್ತಲೇ ಇರುತ್ತದೆ.

2023ರ ಗ್ಲೋಬಲ್​ ಯೋಗಾ ಇಂಡಸ್ಟ್ರಿ ಮಾಹಿತಿ ಪ್ರಕಾರ, ವಿಶ್ವದಲ್ಲಿ ಯೋಗ್ಯಾಭ್ಯಾಸ ಅತಿ ಹೆಚ್ಚು ನಡೆಯುತ್ತಿರುವುದು ಕೆನಡಾದಲ್ಲಿ. ಅಂದರೆ ಇಡೀ ಜಗತ್ತಿನಲ್ಲಿ, ಕೆನಡಾದಲ್ಲೇ ಅತಿ ಹೆಚ್ಚು ಜನರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದಾರಂತೆ. ಎರಡನೇ ಸ್ಥಾನದಲ್ಲಿ ಸಿಂಗಾಪುರ, ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ನಂತರ ಯುಎಸ್​, ಭಾರತ ದೇಶಗಳು ಇವೆ.

ಯೋಗ ಅತ್ಯಂತ ಪ್ರಸಿದ್ಧಿ ಪಡೆದಿರುವ ಕೆನಡಾದಲ್ಲಿ, ಐವರಲ್ಲಿ ಒಬ್ಬರು ಯೋಗಾಭ್ಯಾಸ ಅಳವಡಿಸಿಕೊಂಡಿದ್ದಾರೆ. ಇಲ್ಲೀಗ 2000ಕ್ಕೂ ಅಧಿಕ ಯೋಗ ಬೋಧಕರು ಇದ್ದಾರೆ. ಇಲ್ಲಿನ ಶೇ.9ರಷ್ಟು ವಯಸ್ಕರು ಯೋಗವನ್ನು ಚಿಕಿತ್ಸೆ ಮತ್ತು ವ್ಯಾಯಾಮದ ಒಂದು ಭಾಗವಾಗಿ ಮಾಡುತ್ತಿದ್ದಾರೆ.

ಇನ್ನು ಯೋಗ ಎಂಬುದು ಅಮೆರಿಕ ಸಂಸ್ಕೃತಿಯ ಒಂದು ಅಂಗ ಎಂದೇ ಹೇಳಿಕೊಳ್ಳುತ್ತಿದೆ. ಇಲ್ಲಿ ಒಟ್ಟಾರೆ ಜನಸಂಖ್ಯೆಯ ಶೇ.10ರಷ್ಟು ಜನರು ಯೋಗಾಭ್ಯಾಸವನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. 2010ರಿಂದ 2021ರ ಅವಧಿಯಲ್ಲಿ ಇಲ್ಲಿ ಯೋಗದ ಪ್ರಸಿದ್ಧತೆ ಶೇ.63.8ರಷ್ಟು ಹೆಚ್ಚಿದೆ. ಅದೂ ಕೂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾದ ಮೇಲೆಯೇ ಯೋಗದ ಪ್ರಾಮುಖ್ಯತೆ ಅಧಿಕವಾಗಿದೆ ಎನ್ನಲಾಗಿದೆ.

ಚೀನಾದಲ್ಲೂ ಕೂಡ ಸುಮಾರು 1 ಕೋಟಿ ಜನರು ಯೋಗವನ್ನು ಅಳವಡಿಸಿಕೊಂಡಿದ್ದಾರಂತೆ. ಸಿಂಗಾಪುರ್​​ನಲ್ಲಿ 4 ಮಿಲಿಯನ್​ಗೂ ಹೆಚ್ಚಿನ ಜನರು ಯೋಗ ಮಾಡುತ್ತಿದ್ದಾರಂತೆ. ಇದರಾಚೆ ವಿಶ್ವದ ಹಲವು ಸಣ್ಣಪುಟ್ಟ ರಾಷ್ಟ್ರಗಳೆಲ್ಲ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿವೆ.

ಜೂನ್ 21 ದಿನ : ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಯೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ.

ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.

ಯೋಗ ವಿಜ್ಞಾನದ ಮಹತ್ವ : ಎಲ್ಲಾ ವಿಜ್ಞಾನಗಳಿಗಿಂತ ಭಿನ್ನವಾದ ಇನ್ನೊಂದು ವಿಜ್ಞಾನವಿದೆ. ಅದುವೇ ಯೋಗವಿಜ್ಞಾನ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ.

ಈ ಸಂಸ್ಥೆಯ ಅಂಗಸಂಸ್ಥೆಯಾದ ‘ರಾಜಯೋಗ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಠಾನವು ಯೋಗ-ವಿಜ್ಞಾನವನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಇಲ್ಲಿ ಧರ್ಮ, ಜಾತಿ, ಮತ, ವಯಸ್ಸು. ವರ್ಣ ಭೇದವಿಲ್ಲದೆ ಸರ್ವರಿಗೂ ಯೋಗ ಶಿಕ್ಷಣವನ್ನು ಉಚಿತವಾಗಿ ಕಲಿಸಲಾಗುತ್ತದೆ.

ಈ ಯೋಗವಿಜ್ಞಾನವು ಮನಸ್ಸು, ಬುದ್ಧಿ, ಸಂಸ್ಕಾರ, ಸ್ವಭಾವ, ವ್ಯವಹಾರ ಚಾರಿತ್ರ್ಯ ಇತ್ಯಾದಿಗಳಿಗೆ ಸಂಬಂಧಿಸಿದೆ. ಇಲ್ಲಿ ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬಂಧವು ಹೇಗೆ ಜೋಡಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ.

ಈ ಸಂಬಂಧಗಳಲ್ಲಿ ತಂದೆ, ಶಿಕ್ಷಕ, ಗುರುವಿನ ಸಂಬಂಧ ಅತಿ ಮುಖ್ಯ.ವರ್ತಮಾನ ಸಮಯದಲ್ಲಿ ಯೋಗದಲ್ಲಿ ಹಠಯೋಗ, ಸನ್ಯಾಸಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಶುಭಯೋಗ, ಲಾಭಯೋಗ, ಯೋಗಾ-ಯೋಗ ಇತ್ಯಾದಿ ಅನೇಕ ಪ್ರಕಾರಗಳು ಇವೆ.

ಪರಮಾತ್ಮನೇ ಕಲಿಸುವ ರಾಜಯೋಗ : ಆತ್ಮನಾಗಿ ಪರಮಾತ್ಮನ ಜೊತೆ ಮನನ, ಚಿಂತನೆ, ಮಿಲನ ಮಾಡಿದಾಗ ಯೋಗಿಯು ಮಗ್ನಾವಸ್ಥೆಯನ್ನು ತಲುಪುತ್ತಾನೆ. ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜ. ಇದರಲ್ಲಿ ಮಾನವನ ಪ್ರವೃತ್ತಿಗಳ ಪರಿವರ್ತನೆ ಮತ್ತು ಶುದ್ಧೀಕರಣವಾಗಿ ಅವನ ಆಹಾರ-ವ್ಯವಹಾರಗಳು ಸುಧಾರಣೆಗೊಂಡು ಸಂಸ್ಕಾರಗಳು ಸತೋಪ್ರಧಾನವಾಗುತ್ತವೆ.

ಹಾಗಾಗಿ ಸಾಮಾನ್ಯ ಮಾನವನು ದೇವ-ಮಾನವನಾಗುತ್ತಾನೆ. ಯೋಗವೆಂಬ ಈ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸುತ್ತದೆ. ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತಾ ಶಕ್ತಿಯು ಹೆಚ್ಚುತ್ತದೆ. ಅಪಾರ ಶಾಂತಿಯ ಅನುಭವ ಆಗುತ್ತದೆ.

ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವ ಆಗುತ್ತದೆ. ಅವನ ವರ್ತನೆಯಲ್ಲಿ ಪರಿವರ್ತನೆಯಾಗಿ ಮನಸ್ತಾಪ, ಈರ್ಷೆ-ದ್ವೇಷ, ಕ್ರೋಧ ಇತರೆ ವಿಕಾರಿಗುಣಗಳು ದೂರವಾಗುತ್ತವೆ. ಅವನ ಮನಸ್ಸಿನಲ್ಲಿ ಉದ್ವೇಗಗಳ ಜ್ವಾಲಾಮುಖಿ ಸ್ಫೋಟಗೊಳ್ಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ. ಏಕರಸ ಸ್ಥಿತಿ ಅಥವಾ ಆನಂದದ ಸ್ಥಿತಿ ಅವನದಾಗಿರುತ್ತದೆ.

ನಿರಂತರ ಅಭ್ಯಾಸದ ಮೂಲಕ ದೇಹ ಮತ್ತು ಇಂದ್ರಿಯಗಳ ನಿಯಂತ್ರಣದೊಂದಿಗೆ ಮಾನವ ಪ್ರಜ್ಞೆಯನ್ನು ಪರಿವರ್ತಿಸುತ್ತದೆ. ಮಾನವ ದೇಹವು ಇಡೀ ಶರೀರದ ವಾಹನವಾಗಿದೆ.

ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ.

ಇಂದಿನ ಆಧುನಿಕ ಯುಗದಲ್ಲಿ   ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ನಾವು  ನಮ್ಮ ಜೀವನಶೈಲಿಯಿಂದಾಗಿ ಅನೇಕ  ಸಮಸ್ಯೆಗಳನ್ನು ಒತ್ತಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇವೆ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ  ರೋಗಗಳನ್ನು ನಿಯಂತ್ರಿಸಲು ನಾವು ವಿಧಾನಗಳನ್ನು ಹುಡುಕಿದ್ದೇವೆ. ಆದರೆ ಸಂವಹನ ಮಾಡದ ರೋಗಗಳಿಗೆ ಹೊರೆ ವರ್ಗಾಯಿಸಿಕೊಂಡಿದೆ. ಶಾಂತಿಯಿಲ್ಲದೆ ನರಳಾಡುತ್ತಿರುವ ಇಂದಿನ ಯುವ ಜನಾಂಗ ಔಷಧಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ.

“ದೇಹವು ಮನಸ್ಸಿನ ದೇವಸ್ಥಾನವಾಗಿದ್ದರೆ, ಯೋಗವು ಸುಂದರವಾದ ದೇವಸ್ಥಾನವನ್ನು ಸಷ್ಟಿಸುತ್ತದೆ.

ಈ ಬಾರಿ   7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೇಂದ್ರ ಸರ್ಕಾರ ಯೋಗ ದಿನವನ್ನು ಲೇಹ್ ನಲ್ಲಿ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿತ್ತು. ಆದರೆ ಕೋವಿಡ್ ಕಾರಣದಿಂದ ರದ್ದುಗೊಳಿಸಲಾಯಿತು.

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಡಿಜಿಟಲ್ ಆಗಿರಲಿದೆ.   ಡಿಜಿಟಲ್ ಮೀಡಿಯಾ ವೇದಿಕೆಗಳ ಮೂಲಕ ಯೋಗ ದಿನಾಚರಣೆ ನಡೆಯಲಿದೆ, ಪ್ರಧಾನಿಗಳು  ಸಂದೇಶವನ್ನು ನೀಡಲಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ದೂತವಾಸ ಕಚೇರಿಗಳು ಡಿಜಿಟಲ್ ಮಾಧ್ಯಮಗಳ ಮೂಲಕ ಯೋಗ ದಿನಾಚರಣೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿವೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ’ಯ ಉದ್ದೇಶವು ಯೋಗದ ಅನೇಕ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಪ್ರಪಂಚದ ಜನರಿಗೆ ಅರಿವು ಮೂಡಿಸುವುದಾಗಿದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ವಿಭಿನ್ನ ಥೀಮ್ ಇರುತ್ತದೆ. ‘ಅಂತಾರಾಷ್ಟ್ರೀಯ ಯೋಗ ದಿನ 2023’ ಥೀಮ್ ‘”ವಸುಧೈವ ಕುಟುಂಬಕಂ” ಅಥವಾ “ಒಂದು ವಿಶ್ವ – ಒಂದು ಕುಟುಂಬ – ಎಲ್ಲರ ಕಲ್ಯಾಣಕ್ಕಾಗಿ ಯೋಗ” ಎಂಬುದು ಈ ವರ್ಷದ ವಿಶ್ವಯೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ.’

ಈ ಹಿಂದಿನ ವರ್ಷಗಳಲ್ಲಿ  –

2022 ರ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ ‘ಒಟ್ಟಿಗೆ ಯೋಗ’ ಆಗಿತ್ತು.

ಅಂತರಾಷ್ಟ್ರೀಯ ಯೋಗ ದಿನದ 2021 ರ ಥೀಮ್ ‘ಯೋಗ ಯೋಗಕ್ಷೇಮಕ್ಕಾಗಿ’.

ಅಂತರಾಷ್ಟ್ರೀಯ ಯೋಗ ದಿನದ 2020 ರ ಥೀಮ್ ‘ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ’.

ಅಂತರಾಷ್ಟ್ರೀಯ ಯೋಗ ದಿನದ 2019 ರ ಥೀಮ್ “ಹೃದಯಕ್ಕಾಗಿ ಯೋಗ”.

ಅಂತರಾಷ್ಟ್ರೀಯ ಯೋಗ ದಿನದ 2018 ರ ಥೀಮ್ “ಶಾಂತಿಗಾಗಿ ಯೋಗ”.

ಅಂತರಾಷ್ಟ್ರೀಯ ಯೋಗ ದಿನದ 2017 ರ ಥೀಮ್ “ಆರೋಗ್ಯಕ್ಕಾಗಿ ಯೋಗ”.

ಅಂತರಾಷ್ಟ್ರೀಯ ಯೋಗ ದಿನದ 2016 ರ ಥೀಮ್ “ಯುವಕರನ್ನು ಸಂಪರ್ಕಿಸಿ”.

ಅಂತರಾಷ್ಟ್ರೀಯ ಯೋಗ ದಿನದ 2015 ರ ಥೀಮ್ “ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ

ಈ ವರ್ಷದ ಯೋಗ ದಿನದ ಥೀಮ್ ಮಾನವೀಯತೆಯ ತತ್ವವನ್ನು ಅಳವಡಿಸಿ ಕೊಂಡಿದೆ.

2023 ಅಂತರಾಷ್ಟ್ರೀಯ ಯೋಗ ದಿನದ ವಿಶೇಷತೆ : ವಿಶ್ವಸಂಸ್ಥೆ ಕಚೇರಿಯ ಲ್ಯಾನ್​ನಲ್ಲಿ ವಿಶ್ವಯೋಗ ದಿನಾಚರಣೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ.

ವಿಶ್ವಸಂಸ್ಥೆ(ನ್ಯೂಯಾರ್ಕ್​): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.

ಈ ಕಾರ್ಯಕ್ರಮದ ಬಗ್ಗೆ ವಿಶ್ವದಾದ್ಯಂತ ಸುಮಾರು 1,800 ರಾಜತಾಂತ್ರಿಕರು ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷೆ ಮತ್ತು ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್ ಅವರು ಯೋಗ ಸಮಾರಂಭದಲ್ಲಿ ಮೋದಿ ಅವರೊಂದಿಗೆ ಭಾಗವಹಿಸಲಿದ್ದು, ಸಾಮೂಹಿಕ ಯೋಗಾಸನಗಳ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನವು ಬುಧವಾರ ನ್ಯೂಯಾರ್ಕ್ ನಲ್ಲಿ ಬೆಳಗ್ಗೆ 8 ರಿಂದ 9 ರವರೆಗೆ ಅಂದರೆ ಭಾರತೀಯ ಕಾಲಮಾನ ಸಂಜೆ 5:30 ರಿಂದ 6:30 ವರೆಗೆ ನಡೆಯಲಿದೆ.

ಯೋಗ ದಿನದ ನೇರ ಪ್ರಸಾರ ಯುಎನ್ ನೆಟ್‌ವರ್ಕ್‌ – webtv. un.org ನಲ್ಲಿ ಸಿಗಲಿದೆ. ಇನ್ನೊಂದೆಡೆ, ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಯೋಗ ಆಚರಣೆಯಲ್ಲಿ ಮೋದಿ ಭಾಗವಹಿಸುವುದಿಲ್ಲ. ಕಾನ್ಸುಲೇಟ್, ನಾಗರಿಕ ಗುಂಪುಗಳು ಮತ್ತು ಯೋಗ ಸಂಸ್ಥೆಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ವಾರ್ಷಿಕ ಕಾರ್ಯಕ್ರಮಕ್ಕೆ “ಮೈಂಡ್ ಓವರ್ ಮ್ಯಾಡ್ನೆಸ್ ಯೋಗ” ಎಂದು ಕರೆಯಲಾಗುತ್ತದೆ.

ಯೋಗವು  ಇಂದು ವಿಶ್ವದಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ತಮ್ಮ ಬದುಕಿನ ದೈನಂದಿನ ಚಟುವಟಿಕೆಗಳನ್ನಾಗಿ ಮಾಡಿಕೊಂಡು ಮಾನಸಿಕ ದೈಹಿಕ ಒತ್ತಡದಿಂದ ಹೊರಬಂದಿದ್ದಾರೆ. ನಾವೆಲ್ಲರೂ ಯೋಗವನ್ನು ಅಭ್ಯಾಸ ಮಾಡುತ್ತಾ ಸದೃಢ ವಿಶ್ವವನ್ನು ಕಟ್ಟೋಣ.