ಅಡುಗೆ ಮನೆಯ ರಾಣಿ ಟೊಮೆಟೊ  ಕಥೆ-ವ್ಯಥೆ

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಮರಿಯಮ್ಮನ ಹಳ್ಳಿ

ಈಕೆ ನಮ್ಮ ಮನೆಗಳಿಗೆ ಬಂದು  ಸಹಸ್ರಾರು ವರ್ಷಗಳೇನು ಆಗಿಲ್ಲ, ಬರೀ ನೂರಾರು ವರ್ಷಗಳಾಗಿವೆ.ಅದರೂ ಎಲ್ಲರ ಅಡುಗೆ ಮನೆಯಲ್ಲಿಯೂ ರಾಣಿ ಮಹಾರಾಣಿಯಾಗಿ ಮೆರೆಯುವಳು , ಈಕೆಯು ಇಲ್ಲದ ಆಹಾರ ರುಚಿಯೇ ಇಲ್ಲವೆನ್ನೂವಷ್ಟು ಎಲ್ಲರ ಮನ ಮನೆಯನ್ನೂ ಆವರಿಸಿದ್ದಾಳೆ, ಪ್ರತಿ ವರ್ಷ  ಸುದ್ದಿಯಲ್ಲಿ ಇಲ್ಲದಿದ್ದರೆ ಈಕೆಗೆ ಸಮಾಧಾನವೇ ಇಲ್ಲ ,ತಿನ್ನುವರಿಗೆ ಖುಷಿ ಕೊಡುವಳು.ಬೆಳೆಯುವರಿಗೆ ಒಮ್ಮೆ ಸಂತೋಷ ಒಮ್ಮೊಮ್ಮೆ ದುಃಖ ತರುವವಳು ಈಕೆಯೇ”  ಭಾರತೀಯರ ಅಡುಗೆ ಮನೆಯ ರಾಣಿ- ಮಹಾರಾಣಿ ಈ ಟೊಮೆಟೊ (Tomato)’

 ಇಂದು ಟೊಮ್ಯಾಟೊ ಬೆಲೆ ಈಗ ನೂರರ ಗಡಿ ದಾಟಿದೆ. ಪ್ರತಿ ಅಡುಗೆ ಮನೆಯ ಪ್ರಮುಖ ತರಕಾರಿಗಳಲ್ಲಿ ಒಂದಾದ ಈ  ಟೊಮೆಟೊ, ಇದರ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಹೊಡೆತಕ್ಕೆ ಸಿಲುಕಿದರೆ, ರೈತರ ಮುಖದಲಿ ಮಂದಹಾಸ ಮೂಡಿಸಿದೆ. ಇನ್ನೊಂದು ಕಡೆ ಸರ್ಕಾರಕ್ಕೂ ಕೂಡ ದೊಡ್ಡ ಸವಾಲು ಎದುರಾಗಿದೆ.

  ಟೊಮೆಟೊ ಇರದೆ ದಿನ ಸಾಗುವುದಿಲ್ಲ. ರಸಂ, ಸಾಂಬಾರು,ರೈಸ್ ಬಾತ್, ಚಿತ್ರನ್ನ, ಖಾರ ಬಾತ್ ಗೊಜ್ಜು, ಚಟ್ನಿ ವೆಜ್ – ನಾನ್ ವೆಜ್ ಬಿರಿಯಾನಿ, ಪಲಾವ್, ಮಾಂಸದ ಅಡುಗೆ,  ಹೀಗೆ ಏನೇ ಮಾಡಿದರೂ ಟೊಮ್ಯಾಟೋ ಬೇಕು. ಅಡುಗೆಯ ರುಚಿ ಹೆಚ್ಚಿಸುವ ಈ ತರಕಾರಿ ಎಲ್ಲದಕ್ಕೂ ಈ ಟೊಮೆಟೊ ಬೇಕೇ ಬೇಕು.  ಮನುಷ್ಯನ ಯೌವನವನ್ನು ಕಾಪಾಡುತ್ತದೆ, ಏಕೆಂದರೆ ಟೊಮೆಟೊ ಸರಿಯಾದ ಜೀರ್ಣಶಕ್ತಿಯನ್ನು ನಿರ್ವಹಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಹೊಟ್ಟೆಯ ಹುಳುಗಳನ್ನು ನಿವಾರಿಸುತ್ತದೆ. ಟೊಮೆಟೊ ತಿನ್ನುವುದರಿಂದ ಹಸಿವು ಹೆಚ್ಚುತ್ತದೆ. ಇದು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಟೊಮೆಟೊದ ವಿಶೇಷತೆ ಎಂದರೆ ಅದರಲ್ಲಿ ಕಂಡುಬರುವ ವಿಶೇಷ ಅಂಶಗಳು ಸೂರ್ಯನ ಬಿಸಿಲು ಮತ್ತು ನೇರಳಾತೀತ ಕಿರಣಗಳಿಂದ ಮಾನವ ಚರ್ಮವನ್ನು ರಕ್ಷಿಸುತ್ತದೆ. ಟೊಮೇಟೊದ ಅನನುಕೂಲವೆಂದರೆ ಅದು ಅತಿಯಾಗಿ ತಿಂದರೆ ಆಮ್ಲೀಯತೆಯನ್ನು ಉಂಟುಮಾಡುತ್ತದೆ.

ಭಾರತಕ್ಕೆ ಬಂದ ಕಥೆ

ಟೊಮೆಟೊ ಮೂಲತಃ ನಮ್ಮ ಬೆಳೆಯಲ್ಲ, ಈ ಟೊಮೆಟೊ ಕೃಷಿಯು ಪೆರುವಿನಲ್ಲಿ ಐದನೇ ಶತಮಾನದಲ್ಲಿ ಪ್ರಾರಂಭವಾಯಿತು. ನಂತರ ಅದು ಸ್ಪೇನ್, ಮೆಕ್ಸಿಕೋ ಮೂಲಕ ಮುಂದುವರೆಸಿತು. ಒಂದು ಕಾಲದಲ್ಲಿ ಅಮೆರಿಕಾದಲ್ಲಿ ಇದನ್ನು ‘ಲವ್ ಆಪಲ್’ ಎಂದು ಕರೆಯಲಾಗುತ್ತಿತ್ತು. ಕೆಲವು ದೇಶಗಳಲ್ಲಿ, ಟೊಮೆಟೊದ ಕೆಂಪು ಬಣ್ಣವನ್ನು ನೋಡಿ, ಅದನ್ನು ವಿಷಕಾರಿ ಎಂದು ಪರಿಗಣಿಸಲಾಗಿತ್ತಂತೆ.  ನಂತರ ಅದನ್ನು ಬಳಸಲು ಶುರುಮಾಡಿದರು .

 ಟೊಮೆಟೊದ ಭಾರತದಲ್ಲಿ ಪ್ರವೇಶವು 16 ನೇ ಶತಮಾನದಲ್ಲಿ ಆಗಿದೆ ಎಂದು ನಂಬಲಾಗಿದೆ. ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ವ್ಯಾಪಾರಿಗಳು ಅದನ್ನು ದೇಶಕ್ಕೆ ತಂದರು. ಆ ಸಮಯದಲ್ಲಿ ಭಾರತದಲ್ಲಿ ಇದನ್ನು ‘ವಿದೇಶಿ ಬದನೆ’ ಎಂದು ಕರೆಯಲಾಗುತ್ತಿತ್ತು. ಆದರೆ ಅದರ ಹಳೆಯ ಹೆಸರು ಟೊಮೇಟೊ ಆಗಿರುವುದರಿಂದ ಅದೇ ಹೆಸರು ಟೊಮೇಟೊ ಎಂದು ಬದಲಾಗಿದೆ. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಎರಡನೇ ಯುದ್ಧದ ಸಮಯದಲ್ಲಿ ಟೊಮೆಟೊ ಕೃಷಿ ಮತ್ತು ಬಳಕೆ ಪ್ರಪಂಚದಾದ್ಯಂತ ಹೆಚ್ಚಾಯಿತು ಆದರೆ ಪೋರ್ಚುಗೀಸರು ಇದನ್ನು ಭಾರತಕ್ಕೆ ತಂದಾಗ ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ಇದನ್ನು ವ್ಯಾಪಕವಾಗಿ ಸೇವಿಸಿದಾಗ, ಭಾರತೀಯರೂ ಇದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು.

ವಿಶೇಷವೆಂದರೆ ಆಕ್ಸ್ಫರ್ಡ್ ಡಿಕ್ಷನರಿಯು ಟೊಮೆಟೊವನ್ನು ಹಣ್ಣಿನ ವರ್ಗಕ್ಕೆ ಸೇರಿಸಿದೆ. ಅವರ ಪ್ರಕಾರ, ಟೊಮೆಟೊ ತುಂಬಾ ಮೃದುವಾದ ಕೆಂಪು ಹಣ್ಣು, ಇದು ಬಹಳಷ್ಟು ರಸವನ್ನು ಹೊಂದಿರುತ್ತದೆ ಮತ್ತು ಅದರ ಚರ್ಮವು ಪ್ರಕಾಶಮಾನವಾದ ಕೆಂಪು ಬಣ್ಣದ್ದಾಗಿದೆ. ಇದನ್ನು ಹಸಿಯಾಗಿ ಅಥವಾ ತರಕಾರಿಯಾಗಿ ಬೇಯಿಸಿ ತಿನ್ನಬಹುದು.ಇದನ್ನು ಇಡೀ ಪ್ರಪಂಚದಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಖಂಡಿತಾ ಕಾಣಿಸುತ್ತದೆ. ನಿತ್ಯಹರಿದ್ವರ್ಣ ಟೊಮೆಟೊ. ಪ್ರತಿ ಋತುವಿನಲ್ಲಿ ಲಭ್ಯವಿರುತ್ತದೆ. ಪ್ರಪಂಚದಾದ್ಯಂತ 9,000 ಕ್ಕೂ ಹೆಚ್ಚು ವಿಧದ ಟೊಮೆಟೊಗಳನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಮುಂಬೈ, ನಾಸಿಕ್, ಜೈಪುರಿಯಾ ಟೊಮೇಟೊ ಜತೆಗೆ ಚೆರ್ರಿ ಟೊಮೇಟೊ ಕೂಡ ಹೆಚ್ಚು ಸಿಗಲಾರಂಭಿಸಿದೆ.ಟೊಮೇಟೊ ಭಾರತಕ್ಕೆ ಇಷ್ಟು ತಡವಾಗಿ ಪ್ರವೇಶಿಸಿದ್ದು ಏಕೆ? ಈ ಬಗ್ಗೆ ವಿಶಾಲವಾದ ಅಭಿಪ್ರಾಯದ ಪ್ರಕಾರ, ತರಕಾರಿಗೆ ಪರಿಮಳವನ್ನು ತರಲು ಮತ್ತು ಅದನ್ನು ಹುಳಿ ಮಾಡಲು ಭಾರತದಲ್ಲಿ ಟೊಮೆಟೊಗೆ ಪರ್ಯಾಯವಾಗಿದೆ. ಹುಣಸೆಹಣ್ಣು, ಅಮಚೂರು ಮತ್ತು ಆಮ್ಲಾ ಹಾಗೆ. ಅವುಗಳನ್ನು ಆಯುರ್ವೇದದ ಪ್ರಾಚೀನ ಪಠ್ಯ ‘ಚರಕಸಂಹಿತಾ’ದಲ್ಲಿ ವಿವರಿಸಲಾಗಿದೆ.

ಟೊಮೆಟೊ ಹಣ್ಣು ಅಥವಾ ತರಕಾರಿಯೇ ಎಂಬುದು ಪ್ರಶ್ನೆ. , ಸಸ್ಯಶಾಸ್ತ್ರದ ಪ್ರಕಾರ ಟೊಮೆಟೊ ಒಂದು ಹಣ್ಣು. ಆದರೆ ಇದನ್ನು ಬೇಯಿಸದೆ ಬೇಯಿಸಿದ ರೂಪದಲ್ಲಿ ಹೆಚ್ಚು ಬಳಸಲಾಗುತ್ತದೆ, ಆದ್ದರಿಂದ ಇದನ್ನು ತರಕಾರಿ ಎಂದು ಕರೆಯಲಾಯಿತು.

ಟೊಮೆಟೊ ಬೆಲೆ ಏರಲು ಕಾರಣ

ಸಾಮಾನ್ಯವಾಗಿ ಪ್ರತಿ ವರ್ಷ ಈ ಸಮಯದಲ್ಲಿ ಮಾಮೂಲಿ ದರಕ್ಕಿಂತ ಹೆಚ್ಚು ಇರುತ್ತದೆ. ಈ ವರ್ಷ

ಟೊಮೆಟೊ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣ ಟೊಮೇಟೊ ಉತ್ಪಾದನೆ ಇಳುವರಿ ಕಡಿಮೆಯಾಗಿರುವುದು ಜೊತೆಗೆ ಬೆಳೆಗೆ ಆವರಿಸಿರುವ ರೋಗ ಇದಕ್ಕೆ ಕಾರಣ ಎಂದು ಎಲ್ಲಾ  ವರದಿಗಳಲ್ಲಿ ಹೇಳಲಾಗಿದೆ. ಅಂಕಿಅಂಶಗಳ ಪ್ರಕಾರ, 2021-22ರಲ್ಲಿ ಟೊಮೆಟೊ ಉತ್ಪಾದನೆಯು 20,694 (‘000   ಮೆಟ್ರಿಕ್ ಟನ್ ) ಆಗಿತ್ತು. ಇದು 2022-23 ರಲ್ಲಿ 20,621 (‘000 ಮೆಟ್ರಿಕ್ ಟನ್) ಅಂದರೆ 0.4 ಶೇಕಡಾದಷ್ಟು  ಕಡಿಮೆಯಾಗಿದೆ.

ರಾಜ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ 51.5 ಪ್ರತಿಶತ  ಟೊಮೇಟೊ ಉತ್ಪಾದನೆಯಾಗುತ್ತದೆ. ಆದರೆ ಈ ಬಾರಿ ಗುಜರಾತ್ನಂತಹ ರಾಜ್ಯಗಳಲ್ಲಿ ಉತ್ಪಾದನೆ ಶೇ.23.9ರಷ್ಟು ಕುಸಿದಿದ್ದು, ತಮಿಳುನಾಡು ಮತ್ತು ಛತ್ತೀಸ್ಗಢದಲ್ಲಿ ಉತ್ಪಾದನೆ ಶೇ.20ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ. ಇದೇ ಕಾರಣಕ್ಕೆ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದೆ.

ಟೊಮೆಟೊ ಚಿಲ್ಲರೆ ಬೆಲೆ ಜೂನ್ನಲ್ಲಿ ಸುಮಾರು 38.5 ಪ್ರತಿಶತದಷ್ಟು ಹೆಚ್ಚಾಗಿದೆ.  ಟೊಮೆಟೊ ಸಗಟು ದರದಲ್ಲಿ ಶೇ.45.3ರಷ್ಟು ಏರಿಕೆಯಾಗಿದೆ.

ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಮಾತ್ರವಲ್ಲದೆ, ಇದೇ ಜಿಲ್ಲೆಯಲ್ಲೇ ಅತಿ ಹೆಚ್ಚು ಟೊಮೆಟೊವನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಎಲೆ ಸುರುಳಿ ವೈರಸ್ನಿಂದಾಗಿ ಬೆಳೆ ಸರಿಯಾಗಿ ಆಗಿಲ್ಲ.

ಜೂನ್ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ತೀವ್ರವಾಗಿ ಕುಸಿತವಾಗಿದೆ.

2021ರ ಜೂನ್ನಲ್ಲಿ 9.37 ಲಕ್ಷ ಕ್ವಿಂಟಲ್, 2022ರ ಜೂನ್ನಲ್ಲಿ 5.45 ಲಕ್ಷ ಕ್ವಿಂಟಾಲ್ ಟೊಮೆಟೊ ಕೋಲಾರದ ಎಂಪಿಎಂಸಿಗೆ ಪೂರೈಕೆಯಾಗಿತ್ತು. ಆದರೆ 2023ರ ಜೂನ್ನಲ್ಲಿ ಕೇವಲ 3.2 ಲಕ್ಷ ಕ್ವಿಂಟಾಲ್ ಟೊಮೆಟೊ ಬಂದಿದೆ. ವರ್ಷದಿಂದ ವರ್ಷಕ್ಕೆ ಟೊಮೆಟೊ ಪೂರೈಕೆ ಇಳಿಮುಖದ ಹಾದಿಯಲ್ಲೇ ಇದೆ.

ಇಳುವರಿ ಕುಸಿತಕ್ಕೆ ಪ್ರಮುಖ ಕಾರಣ ಎಲೆ ಸುರುಳಿ ರೋಗ ಎಂದು ರೈತರು ಹೇಳುತ್ತಾರೆ. ಕೋಲಾರ ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಲ್ಲೂ ಈ ವೈರಸ್ ಟೊಮೆಟೊ ಬೆಳೆಯನ್ನು ಹಾನಿ ಮಾಡಿದೆ.

ಇಳುವರಿ ಕುಸಿತಕ್ಕೆ ಟೊಮೇಟೊ ಲೀಫ್ ಕರ್ಲ್ ವೈರಸ್ ರೋಗ ಕಾರಣ ಎಂದು ರೈತರು ಹೇಳುತ್ತಾರೆ, ಈ ಬಾರಿ ಸಾಮಾನ್ಯವಾಗಿ 15 ಸುತ್ತುಗಳ ಫಸಲು ಪಡೆಯುತ್ತೇವೆ. ಆದರೆ ಈ ಬಾರಿ ರೋಗ ಭಾದೆಯಿಂದ ಗಿಡಗಳು ಒಣಗುತ್ತಿರುವ ಕಾರಣ ಕೇವಲ ಮೂರರಿಂದ 5 ಸುತ್ತ ಮಾತ್ರ ಫಸಲು ಸಿಗುತ್ತಿದೆ ಎಂದು ರೈತರೊಬ್ಬರು ವಿವರಿಸಿದ್ದಾರೆ. ಇದು ಕೋಲಾರ ಮತ್ತು ನೆರೆಯ ಟೊಮೆಟೊ ಬೆಳೆಯುವ ಜಿಲ್ಲೆಗಳಲ್ಲಿ ಬೆಳೆಗೆ ಹಾನಿಯಾಗಿದೆ.

ಕೋಲಾರದ ಹಳ್ಳಿಗಳಲ್ಲಿ ಟೊಮೆಟೊ ಬೆಳೆಗೆ ಎಲೆ ಸುರುಳಿ ವೈರಸ್ ಶೇಕಡಾ 50 ಕ್ಕಿಂತ ಹೆಚ್ಚು ಬೆಳೆಗಳ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಐಸಿಎಆರ್-ಐಐಹೆಚ್ಆರ್ ವಿಜ್ಞಾನಿಗಳ ತಂಡ ಕ್ಷೇತ್ರ ಭೇಟಿ ಆಧಾರಿತ ವರದಿಯಲ್ಲಿ ಖಚಿತಪಡಿಸಿದೆ.

72 ಗಂಟೆಗಳ ಕಾಲ ಹಣ್ಣು ಗಟ್ಟಿಯಾಗಿ ನಿಂತರೆ ಮಾತ್ರ ಎಂಪಿಎಸಿ ಮಾರುಕಟ್ಟೆಯಿಂದ ದೆಹಲಿಯಂತಹ ದೂರದ ಸ್ಥಳಗಳಿಗೆ ಹಣ್ಣನ್ನು ಸರಬರಾಜು ಮಾಡಬಹುದಾಗಿದೆ. ಆದರೆ ಪ್ರಮುಖ ಮಾರುಕಟ್ಟೆಗೆ ಬರುತ್ತಿರುವ ಟೊಮೆಟೊ ಹಣ್ಣು 52 ಗಂಟೆಗಳ ನಂತರ ಬಿಗಿತನವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ಪ್ರತಿ ವರ್ಷದ ಜೂನ್ನಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ 300 ರಿಂದ 1,250 ರೂಪಾಯಿಗಳ ವರೆಗೆ ಇರುತ್ತದೆ. ಆದರೆ ಈ ವರ್ಷ 300 ರೂಪಾಯಿಯಿಂದ 1,500 ರೂಪಾಯಿ ವರೆಗೆ ತಲುಪಿದೆ. ಬೆಂಗಳೂರಿನ ಕೆಲವು ಕಡೆಗಳಲ್ಲಿ ಕೆಜಿ ಟೊಮೆಟೊ 100 ಗಡಿಯನ್ನೂ ದಾಟಿದೆ.

ಉತ್ತರ ಭಾರತದಲ್ಲಿ ಭಾರಿ ಮಳೆ ಹಾಗೂ ಇತರೆ ಕಾರಣಗಳಿಂದಾಗಿ ಜೂನ್, ಜುಲೈ ಅವಧಿಯಲ್ಲಿ ಟೊಮೆಟೊ ಸೇರಿದಂತೆ ಪ್ರಮುಖ ಬೆಳೆಗಳು ಕೈಕೊಡುತ್ತವೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬಹುತೇಕ ತರಕಾರಿಗಳ ಬೆಲೆಗಳು ಗಗನಕ್ಕೇರುತ್ತವೆ .

ನವೆಂಬರ್ ಬೆಳೆ ಹಂಗಾಮಿನ ಆಗಮನವಾಗಿದ್ದು, ಟೊಮೆಟೊ ಬೆಲೆ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಿದೆ. ರಬಿ ಟೊಮೆಟೊ ಬೆಳೆಗೆ ಕೊಯ್ಲು ಅವಧಿಯು ಡಿಸೆಂಬರ್-ಜೂನ್ ವರೆಗೆ ಇರುತ್ತದೆ. ಶಾಖದ ಅಲೆಗಳು ಅಥವಾ ಅನಿಯಮಿತ ಮಳೆಯು ಬೆಳೆಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಬೆಲೆಯಲ್ಲಿ ಹಠಾತ್ ಜಿಗಿತ  ಉಂತಾಗುವ  ಸಾಧ್ಯತೆ ಹೆಚ್ಚು. ಜುಲೈ-ನವೆಂಬರ್ ಬೆಳೆ ಹಂಗಾಮಿಗೆ ಬಂದರೆ ಟೊಮೇಟೊ ಬೆಲೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಇನ್ನು ಮುಂಗಾರು ಮಳೆ  ಉತ್ತರ ಕರ್ನಾಟಕ ಭಾಗದಲ್ಲಿ ಕೈ ಕೊಟ್ಟಿದ್ದು  ಟೊಮ್ಯಾಟೊ ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಇನ್ನಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ

ಕೆಲವೆಡೆ ಅತಿಯಾದ ಇನ್ನೂ ಕೆಲ ಭಾಗಗಳಲ್ಲಿ ಮಳೆ ಅಭಾವದಿಂದಾಗಿ  ಟೊಮೆಟೊ ಬೆಳೆಗೆ ಹಾನಿಯಾಗಿದ್ದು, ಕೆಲವು ಕಡೆಗಳಲ್ಲಿ ಬಿರು ಬಿಸಿಲಿನಿಂದಾಗಿ ಸರಿಯಾಗಿ ಇಳುವರಿ ಬಂದಿಲ್ಲ.  ಹಿಂದಿನ ವರ್ಷದಲ್ಲಿ ಎಲ್ಲಾ ಕಡೆ ರೈತರು ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ ಸರಿಯಾಗಿ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು.

ಸದ್ಯ ಮಾರುಕಟ್ಟೆಗಳು, ಮಾಲ್, ಸೂಪರ್ ಮಾರುಕಟ್ಟೆಗಳು ಉತ್ತಮ ಗುಣಮಟ್ಟದ ಕೆಜಿ ಟೊಮೆಟೊ 120 ರಿಂದ 180  ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಮತ್ತು ಮೂರನೇ ಗುಣಮಟ್ಟದ ಟೊಮೆಟೊವನ್ನು ಕೆಜಿಗೆ  80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಟೊಮೆಟೊ ಸಂರಕ್ಷಿಸಲು ಬೇಕಿದೆ ತಂತ್ರಜ್ಞಾನ

ದರ ಏರಿಕೆಯಿಂದ ಕೆಂಗಟ್ಟಿರುವ ಜನತೆಗೆ ಮತ್ತು ದರ ಏರಿಳಿತದಿಂದ ರೋಸಿಹೋಗಿರುವ ರೈತರಿಗೆ ತಂತ್ರಜ್ಞಾನದ ನೆರವು ಬೇಕಿದೆ, ಟೊಮೆಟೊ ಕೆಡದ ಹಾಗೆ ಸಂರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನವು ರೈತರಿಗೆ ಕಡಿಮೆ ಬೆಲೆಗೆ ಕೈಗೆಟುಕುವಂತೆಯಾದರೆ   ಈ ಬೆಲೆ ಏರಿಳಿತ, ಹವಾಮಾನ ವೈಪರೀತ್ಯದಂತಹ ಪರಿಣಾಮಗಳು ಉಂಟಾದರೂ ನೆಮ್ಮದಿಯಿಂದ ಬದುಕಬಹುದು ಅವರ ಜೊತೆಗೆ ಜನರು ಕೂಡ ಈ ಬಗ್ಗೆ ನಮ್ಮ ಕೃಷಿ ವಿಜ್ಞಾನಿಗಳು ಆಲೋಚಿಸಲಿ.