ಚಂದ್ರಯಾನ-3: ಚಂದ್ರನೂರಿನಗೆ ಭಾರತೀಯ ಇಸ್ರೋದ ಚಂದದ ಪಯಣ

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

ಭಾರತೀಯ ಮನದಲ್ಲಿ ಅನಾದಿ ಕಾಲದಿಂದಲೂ ನೆಲೆಗೊಂಡಿರುವ ಚಂದ್ರನ ಬಗೆಗೆ ತಿಳಿಯಲು,ಅವನನೊಳಗೆ  ಅಡಗಿರುವ ನಿಗೂಢತೆಯನ್ನು  ಅರಿಯಲು ನಮ್ಮ ಹೆಮ್ಮೆಯ ಇಸ್ರೋ ಚಂದ್ರಯಾನ-3 ನ್ನು ಚಂದ್ರನೂರಿಗೆ ಇಂದು ಕಳುಹಿಸಲಿದೆ.

ಚಂದ್ರನನ್ನು ಅನ್ವೇಷಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)  ಚಂದ್ರಯಾನ-3 (Chandrayaan-3) ಉಡಾವಣೆಗೆ ಸಜ್ಜಾಗಿದೆ. ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SDSC) ಎಂದರೆ ಶಾರ್ ಹೋಮ್​ನಲ್ಲಿ​ ಇಂದು ಮಧ್ಯಾಹ್ನ 1.05ಕ್ಕೆ ಉಡಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಕೌಂಟ್ಡೌನ್ ಸುಮಾರು 25.30 ಗಂಟೆಗಳ ಕಾಲ ನಡೆಯಲಿದೆ. LVM3-M4 ರಾಕೆಟ್ ಶುಕ್ರವಾರ ಮಧ್ಯಾಹ್ನ 2:35:13 ಕ್ಕೆ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಳ್ಳಲಿದೆ.

ಚಂದ್ರಯಾನ ಸರಣಿಯಲ್ಲಿ ಇದು ಮೂರನೇ ಉಡಾವಣೆಯಾಗಿದೆ (India Moon Mission).  ಈ ಹಿಂದೆ ಚಂದ್ರಯಾನ-1 ಮತ್ತು ಚಂದ್ರಯಾನ-2 ಮಿಷನ್ಗಳಲ್ಲಿ ಚಂದ್ರ ಮೇಲೆ ಉಪಗ್ರಹಗಳನ್ನು ಕಳುಹಿಸಿತ್ತು. ಚಂದ್ರಯಾನ-2 ಮಿಷನ್ನಲ್ಲಿ ಲ್ಯಾಂಡರ್ ಕೂಡ ಸೇರಿತ್ತು, ಆದರೆ ಅದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಲಿಲ್ಲ.

 ಈ ಬಾರಿ ಚಂದ್ರಯಾನ-3 ಮಿಷನ್ನಲ್ಲಿ ಲ್ಯಾಂಡರ್ ವಿಕ್ರಮ್ ಮತ್ತು ಅದರೊಳಗಿನ ರೋವರ್ ಪ್ರಗ್ಯಾನ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತಿದೆ.

ಚಂದ್ರಯಾನ-3 ಉಪಗ್ರಹ ಉಡಾವಣೆಯೊಂದಿಗೆ ಭಾರತ ಚಂದ್ರನ ಕಡೆಗೆ ತನ್ನ ಮೂರನೇ ಹೆಜ್ಜೆ ಇಡಲಿದೆ.ಇದರಲ್ಲಿ ಸಾಧಿಸಿದ ಯಶಸ್ಸು ಭಾರತಕ್ಕೆ ವಿಶ್ವದ ನಾಲ್ಕನೇ ಬಾಹ್ಯಾಕಾಶ ಸೂಪರ್ ಪವರ್ ಸ್ಥಾನಮಾನವನ್ನು ನೀಡುತ್ತದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಉಪಗ್ರಹ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿವೆ.

ಎಲ್ವಿಎಂ-3 (LVM-3) ಎಂಬ ಬಾಹುಬಲಿ ರಾಕೆಟ್

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ISRO) ವಿಜ್ಞಾನಿಗಳು ಚಂದ್ರಯಾನ-3 ಉಡಾವಣೆಗೆ ಬೇಕಾಗಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ಗುರಿ ತಪ್ಪಬಾರದೆಂದು ಅದೆಷ್ಟೋ ಮುತುವರ್ಜಿ ವಹಿಸಿ ಶ್ರಮಿಸುತ್ತಿದ್ದಾರೆ. ಇದೀಗ ಎಲ್ಲರ ದೃಷ್ಟಿ ಎಲ್ವಿಎಂ-3 ರಾಕೆಟ್ನತ್ತ ಕೇಂದ್ರೀಕರಿಸಿದೆ. ಚಂದ್ರಯಾನ-3 ಮಿಷನ್ ಭಾಗವಾಗಿ ಆರ್ಬಿಟರ್, ಲ್ಯಾಂಡರ್, ರೋವರ್ಅನ್ನು ಚಂದ್ರನ ಅಂಗಳಕ್ಕೆ ಹೊತ್ತೊಯ್ಯಲಿದೆ.

LVM-3 ಇದೊಂದು ಹೆವಿ-ಲಿಫ್ಟ್ ಲಾಂಚ್ ವೆಹಿಕಲ್ ಆಗಿದ್ದು, ಇದು ದೊಡ್ಡ ಪೇಲೋಡ್ ಅನ್ನು ಬಾಹ್ಯಾಕಾಶಕ್ಕೆ ಸಾಗಿಸಬಲ್ಲ ಶಕ್ತಿ ಹೊಂದಿದೆ. ಇದಕ್ಕೆ ‘ಬಾಹುಬಲಿ’ ಎಂದು ಕರೆಯಲಾಗುತ್ತದೆ. ISRO ಈವರೆಗೆ ಅಭಿವೃದ್ಧಿಪಡಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ.

ಮೂರು ಹಂತದ ಸಾಮರ್ಥ್ಯದ LVM-3

ರಾಕೆಟ್ಗಳ ‘ಬಾಹುಬಲಿ’ ಎಂದು ಕರೆಯಲ್ಪಡುವ LVM-3 ಮೂರು-ಹಂತದ ಸಾಮರ್ಥ್ಯ ಹೊಂದಿದೆ. ಇದು ಎರಡು ಘನ -ಇಂಧನ ಬೂಸ್ಟರ್ಗಳನ್ನು ಒಳಗೊಂಡಿರುತ್ತದೆ. ಈ ಎಲ್ವಿಎಂ 3 ಘನ-ಇಂಧನ ಬೂಸ್ಟರ್ಗಳು ಆರಂಭಿಕ ಒತ್ತಡವನ್ನು ಒದಗಿಸುತ್ತದೆ. ಆದರೆ ದ್ರವ-ಇಂಧನ ಕೋರ್ ಹಂತವು ರಾಕೆಟ್ ಅನ್ನು ಕಕ್ಷೆಗೆ ಮುಂದೂಡುವಲ್ಲಿ ಒತ್ತಡ ಹಾಕುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಈ ರಾಕೆಟ್ ಘನ ಸ್ಟ್ರಾಪ್-ಆನ್ ಮೋಟಾರ್ಗಳು (S200) ಮತ್ತೊಂದು ಲಿಕ್ವಿಡ್ ಕೋರ್ ಸ್ಟೇಜ್ (L110) 28 ಟನ್ಗಳ ಲೋಡಿಂಗ್ ನೊಂದಿಗೆ ಚಾಲನೆಯಾಗಲಿದೆ. LVM-3 ಇದು 640 ಟನ್ಗಳ ಲಿಫ್ಟ್-ಆಫ್ ದ್ರವ್ಯರಾಶಿ ಹೊಂದಿದೆ. ಇದು 4,000 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್ (GTO) ಅನ್ನು ನಭಕ್ಕೆ ಜಿಗಿಸುವ ಸಾಮರ್ಥ್ಯ ಹೊಂದಿದೆ.

ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೂ ಬಳಕೆ

ಇಸ್ರೋ ಈಗಾಗಲೇ GSAT-19 ಸಂವಹನ ಉಪಗ್ರಹ, ಆಸ್ಟ್ರೋಸ್ಯಾಟ್ ಖಗೋಳ ಉಪಗ್ರಹ ಹಾಗೂ ಚಂದ್ರಯಾನ-2 ಉಡಾವಣೆ ಸೇರಿದಂತೆ ಹಲವು ವಿಭಿನ್ನ ಉಪಗ್ರಹಗಳನ್ನು ಉಡಾವಣೆಗೆ ಎಲ್ವಿಎಂ-3 ಅನ್ನು ಹಿಂದೆ ಬಳಸಲಾಗಿದೆ. ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವಾಗಿರುವ ಗಗನ್ಯಾನ್ ಸಿಬ್ಬಂದಿಯ ಮಿಷನ್ ಅನ್ನು ಪ್ರಾರಂಭಿಸಲು ಸಹ ಇದನ್ನು ಬಳಕೆಗೆ ತೀರ್ಮಾನಿಸಲಾಗಿದೆ.

ರಾಕೆಟ್ ತನ್ನ ಕೋರ್ ಹಾಗೂ ಸ್ಟ್ರಾಪ್-ಆನ್ ಬೂಸ್ಟರ್ಗಳಿಗಾಗಿ ದ್ರವ-ಇಂಧನದ ಎಂಜಿನ್ಗಳನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಇಸ್ರೋ ಪ್ರಕಾರ, ರಾಕೇಟ್ ಎರಡು ಬೂಸ್ಟರ್ಗಳ ಏಕಕಾಲದಲ್ಲಿ ಉರಿಯಲು ಆರಂಭವಾಗುತ್ತದೆ. ನಂತರ ಕೋರ್ ಹಂತ (L110)ವು ರಾಕೇಟ್ ಉಡಾವಣೆಗೊಂಡ 113 ಸೆಕೆಂಡುಗಳಲ್ಲಿ ಒತ್ತಡ ಸೃಷ್ಟಿಸಲು ಆರಂಭಿಸುತ್ತದೆ.

ಒಟ್ಟು 43.5 ಮೀ ಎತ್ತರದ ಮೂರು-ಹಂತದ ಉಡಾವಣಾ ವಾಹನವು GTOನಲ್ಲಿ 4,000 ಕೆಜಿ ತೂಕದ ಸಂವಹನ ಉಪಗ್ರಹ ಉಡಾವಣೆ ಯಶಸ್ವಿಯಾಗುವಲ್ಲಿ ಸಹಾಯ ಮಾಡುತ್ತದೆ. ರಾಕೆಟ್ ಅನ್ನು ಹಿಂದೆ GSLV-MkIII ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಅದನ್ನು LVM-3 ಎಂದು ಮರುನಾಮಕರಣ ಮಾಡಿದ್ದು, ಇದು ಈವರೆಗೆ ಮೂರು ಯಶಸ್ವಿ ಕಾರ್ಯಾಚರಣೆ ಮಾಡಿದೆ.

ಇಸ್ರೋ ಅಭಿವೃದ್ಧಿಪಡಿಸಿರುವ ಲಾಂಚ್ ವೆಹಿಕಲ್ಸ್ಗಳಲ್ಲಿ ಅತ್ಯಂತ ಬಲಿಷ್ಠವಾದ ಎಲ್ವಿಎಂ-3 ಇದೊಂದು ಬಾಹುಬಲಿ ರಾಕೆಟ್ ಅಂತಲೇ ಕರೆಯಲಾಗುತ್ತಿದೆ. ಗರಿಷ್ಠ ತೂಕದ ಉಪಗ್ರಹಗಳನ್ನು ಬಾಹ್ಯಕಾಶಕ್ಕೆ ಸುಲಭವಾಗಿ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ರಾಕೆಟ್ ನಭಕ್ಕೆ ಹಾರಲು ಮೊದಲಿಗೆ ಘನ ಇಂಧನ ಬೂಸ್ಟ್ ಮಾಡುತ್ತದೆ. ನಂತರ ರಾಕೆಟ್ ಚಂದ್ರನ ಕಕ್ಷೆಗೆ ಸೇರಲು ದ್ರವ ರೂಪದ ಇಂಧನ ಕೋರ್ ಸ್ಟೇಜ್ ಸಹಾಯ ಮಾಡುತ್ತದೆ.

ಚಂದ್ರನ ಅಂಗಳಕ್ಕೆ ಕಳುಹಿಸುತ್ತಿರುವ ಚಂದ್ರಯಾನ 3 ಭಾರತದ ಮೂರನೇ ಮಿಷನ್ ಆಗಿದ್ದು, 3,921 ಕೆಜಿ ತೂಕದ ಉಪಗ್ರಹವನ್ನು ಭೂಮಿಯಿಂದ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಸುಮಾರು 4 ಲಕ್ಷ ಕಿಲೋ ಮೀಟರ್ವರೆಗೆ ಹೊತ್ತು ಸಾಗಲಿದೆ. ಅದರ ನಂತರ, ಚಂದ್ರನ ದಕ್ಷಿಣ ಧ್ರುವದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಇಳಿಯಲಿದೆ.

ಅಂದಹಾಗೆ ‘ಚಂದ್ರಯಾನ-1’ ಮತ್ತು ‘ಚಂದ್ರಯಾನ-2’ಗೆ ಹೋಲಿಕೆ ಮಾಡಿದರೆ ಇದೀಗ ‘ಚಂದ್ರಯಾನ-3’ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಚಂದ್ರನ ಸುತ್ತಲೂ ಅವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿ ಧಾತುರೂಪದ ಸಂಯೋಜನೆ ಮುಂತಾದ ವಿಚಾರಗಳ ಅಧ್ಯಯನಕ್ಕೆ ಇಸ್ರೋ ಸಂಸ್ಥೆಯು ಸಜ್ಜಾಗಿದೆ. ಚಂದ್ರಯಾನ-3ರ ಇನ್ನೊಂದು ವಿಶೇಷತೆ ಏನೆಂದರೆ, ಬಾಹ್ಯಾಕಾಶ ನೌಕೆ ಜೊತೆಗೆ ರೋವರ್ ಕೂಡ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ

 ಚಂದ್ರಯಾನ-2ರ ತಪ್ಪುಗಳು

ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಗುರುತಿಸಲಾದ 500ಮೀ x 500ಮೀ ಲ್ಯಾಂಡಿಂಗ್ ಸ್ಪಾಟ್‌ನ ಕಡೆಗೆ ನುಗ್ಗಿದ ವೇಳೆ ಅದರ ವೇಗ ಕಡಿಮೆ ಆಗಬೇಕಿತ್ತು. ಆದರೆ ಕಡಿಮೆ ಮಾಡುವಲ್ಲಿ ವಿಫಲವಾಯಿತು. ನಿರೀಕ್ಷಿಗಿಂತ ಹೆಚ್ಚಿನ ವೇಗ ಇದ್ದಿದ್ದರಿಂದ ಕೆಲವು ತಪ್ಪುಗಳು ಉಂಟಾಗಿದ್ದವು.

ಒಟ್ಟು ಐದು ಇಂಜಿನ್‌ಗಳು ಇರಲಿದ್ದು, ಅವುಗಳು ನೌಕೆಯ ವೇಗ ಕಡಿಮೆ ಮಾಡಿ ಲ್ಯಾಂಡಿಂಗ್‌ಗೆ ಸಹಕರಿಸುತ್ತವೆ. ಇದನ್ನು ರಿಟಾರ್ಡೇಶನ್ ಎಂದು ಕರೆಯಲಾಗುತ್ತದೆ. ಈ ಎಂಜಿನ್‌ಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಒತ್ತಡ ಉಂಟು ಮಾಡುತ್ತವೆ

ಇನ್ನೂ ಚಂದ್ರಯಾನ 2 ನಲ್ಲಿ ಪ್ಯಾರಾಮೀಟರ್ ಪ್ರಸರಣವನ್ನು ನಿರ್ವಹಿಸುವ ಸಾಮರ್ಥ್ಯವು ತುಂಬಾ ಕಡಿಮೆ ಇತ್ತು. ಚಂದ್ರಯಾನ ಮೂರರ ಸಂಬಂಧ ಲ್ಯಾಂಡಿಂಗ್ ಪ್ರದೇಶವನ್ನು 500m x 500m ಬದಲಾಗಿ 4 m ‍X 2.5 km ಗೆ ವಿಸ್ತರಿಸಿದ್ದೇವೆ. ಇಷ್ಟು ದೊಡ್ಡ ಪ್ರದೇಶದಲ್ಲಿ ನೌಕೆ ಎಲ್ಲಿ ಬೇಕಾದರೂ ಇಳಿಯಬಹುದು. ಈ ಬಾರಿ ಲ್ಯಾಂಡಿಂಗ್ ನಿರ್ದಿಷ್ಟ ಬಿಂದು ನಿಗದಿ ಮಾಡಿಲ್ಲ .

ಚಂದ್ರಯಾನ-3 ಹೆಚ್ಚು ಇಂಧನವನ್ನು ಹೊಂದಿರುವುದರಿಂದ ಪ್ರಯಾಣಿಸಲು ಅಥವಾ ಪ್ರಸರಣವನ್ನು ನಿರ್ವಹಿಸಲು ಅಥವಾ ಪರ್ಯಾಯ ಲ್ಯಾಂಡಿಂಗ್ ಸೈಟ್‌ಗೆ ಚಲಿಸಲು ಅಧಿಕ ಸಾಮರ್ಥ್ಯವನ್ನು ಹೊಂದಿದೆ. ವಿಕ್ರಮ್ ಲ್ಯಾಂಡರ್ ಈಗ ಇತರ ಮೇಲ್ಮೈಗಳಲ್ಲಿ ಹೆಚ್ಚುವರಿ ಸೌರ ಫಲಕಗಳನ್ನು ಹೊಂದಿದೆ. ಅದು ಶಕ್ತಿಯನ್ನು ಉತ್ಪಾದಿಸುತ್ತದೆ .

ಜುಲೈ 14 ರಂದು ಉಡಾವಣೆ ವಿಶೇಷ

ವರ್ಷದ ಈ ಸಮಯದಲ್ಲಿ ಭೂಮಿ ಮತ್ತು ಚಂದ್ರ ಇತರ ಸಮಯಕ್ಕಿಂತ ಹತ್ತಿರದಲ್ಲಿ ಇರುತ್ತವೆ. ಇದೇ ಕಾರಣಕ್ಕಾಗಿ 22 ಜುಲೈ 2019 ರಂದು ಚಂದ್ರಯಾನ-2 ಅನ್ನು ಸಹ ಉಡಾವಣೆ ಮಾಡಲಾಗಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಇಳಿಯಲಿದೆ

ಉತ್ತರ ಧ್ರುವಕ್ಕಿಂತ ಹೆಚ್ಚು ನೀರು ಸಿಗುವ ಸಾಧ್ಯತೆ ಇರುವುದರಿಂದ ಭಾರತೀಯ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸಲು ನಿರ್ಧರಿಸಿದ್ದಾರೆ.

ಭೂಮಿ ಚಂದ್ರ ನಡುವಿನ ಅವಿನಾಭಾವ ಸಂಬಂಧ

ಭೂಮಿ ಮತ್ತು ಚಂದ್ರನ ನಡುವೆ ಹೃದಯ ಹಾಗೂ ಮಿದುಳಿನ ಸಂಬಂಧ ಇದೆ. ಯಾಕೆ ಎಂಬ ಪ್ರಶ್ನೆಗೆ ಉತ್ತರ, ಚಂದ್ರನ ಚಲನೆಗಳೇ ಭೂಮಿಯ ಮೇಲೆ ಭೂಕಂಪನ ಸೇರಿದಂತೆ ಸಮುದ್ರದ ಉಬ್ಬರ ಇಳಿತಗಳನ್ನು ನಿರ್ಧರಿಸಲಿದೆ. ಇದೇ ಕಾರಣಕ್ಕೆ ‘ಚಂದ್ರಯಾನ-3’ರಲ್ಲಿ ಅತ್ಯಾಧುನಿಕ ಉಪಕರಣ ಅಳವಡಿಸಿ ಅಧ್ಯಯನ ನಡೆಸಲು ಇಸ್ರೋ ಸಿದ್ಧವಾಗಿದೆ. ಜೊತೆಗೆ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದ ಅಧ್ಯಯನ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಹೀಗೆ ಕಾಲಕ್ಕೆ ತಕ್ಕಂತೆ ನಮ್ಮ ಇಸ್ರೋ ಸಂಸ್ಥೆ ಕೂಡ ಹೈಫೈ ತಂತ್ರಜ್ಞಾನ ಅಳವಡಿಸಿ ‘ಚಂದ್ರಯಾನ-3’ ಲಾಂಚ್ ಮಾಡುತ್ತಿದೆ

ಇಲ್ಲಿಯವರೆಗೆ, ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿವೆ. ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲು ಭಾರತ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಚಂದ್ರನ ದಕ್ಷಿಣ ಧ್ರುವವನ್ನು ಕಂಡುಹಿಡಿಯುವ ಉದ್ದೇಶದಿಂದ 2019 ರಲ್ಲಿ ಚಂದ್ರಯಾನ-2 (ಚಂದ್ರಯಾನ-3) ಅನ್ನು ಉಡಾವಣೆ ಮಾಡಲಾಯಿತು. ಆದಾಗ್ಯೂ, ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡಿಂಗ್​ ಆಗುವಲ್ಲಿ ವಿಫಲವಾಗಿತ್ತು. ಈ ಹಿಂದೆ.. 2008 ರಲ್ಲಿ ಚಂದ್ರಯಾನ-1 (ಲ್ಯಾಂಡರ್ ಇಲ್ಲದೇ ಆರ್ಬಿಟರ್ ಮತ್ತು ಇಂಪ್ಯಾಕ್ಟರ್ನೊಂದಿಗೆ ಪ್ರಯತ್ನ) ಕೈಗೊಳ್ಳಲಾಗಿತ್ತು. ಚಂದ್ರಯಾನ 3 ಮಿಷನ್ ಯಶಸ್ವಿಯಾದರೆ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ.

ಚಂದ್ರಯಾನ-3  ಯಶಸ್ವಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ ಮತ್ತು ಈ ಮೂಲಕ ಭಾರತೀಯ ವಿಜ್ಞಾನಿಗಳ ಸಾಮರ್ಥ್ಯವು ಪ್ರಪಂಚಾದ್ಯಂತ ತಿಳಿಯಲಿ.