ಕಾಂಗ್ರೆಸ್ ನಾಯಕರು ಸಂಸ್ಕಾರವಿಲ್ಲದೆ ಮಾತನಾಡುತ್ತಿದ್ದಾರೆ: ಅಶೋಕ್ ಕಿಡಿ

ಬೆಂಗಳೂರು: ಚುನಾವಣೆಯಲ್ಲಿ ಸೋಲುವ ಹತಾಶೆಯಿಂದಾಗಿ ಕಾಂಗ್ರೆಸ್ ನಾಯಕರು ಸಂಸ್ಕಾರವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.

ಚುನಾವಣೆಯಲ್ಲಿ ಸೋಲು ಖಚಿತವಾಗಿರುವುದರಿಂದ ಉಚಿತ ಯೋಜನೆಗಳು ಇರುವುದಿಲ್ಲ ಎಂಬುದು ಖಚಿತವಾಗಿದೆ ಅದಕ್ಕೇ‌ ಏನೇನೊ ಮಾತನಾಡುತ್ತಾರೆ ಎಂದು ‌ಗರಂ ಆದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಇದು ಸರಯಲ್ಲ ಈಗಲೇ ತಿದ್ದಿಕೊಳ್ಳದಿದ್ದರೆ ಜನರೇ ಪಾಠ ಕಲಿಸುತ್ತಾರೆ ಎಂದರು.

ರಾಹುಲ್‌ ಗಾಂಧಿ ಈಗಾಗಲೇ ಮೋದಿ ಸಮುದಾಯದ ಬಗ್ಗೆ ಮಾತನಾಡಿ ಜೈಲಿಗೆ ಹೋಗುವ ಸ್ಥಿತಿಗೆ ಬಂದಿದ್ದಾರೆ,ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬಂತೆ ಆ ಚಾಳಿ ಎಲ್ಲ ಕಾಂಗ್ರೆಸ್‌ ನಾಯಕರಿಗೆ ಬಂದಿದೆ ಎಂದು ಕುಟುಕಿದರು.

ಸಚಿವ ಶಿವರಾಜ ತಂಗಡಗಿ ಹಾಗೂ ಇತರೆ ಮುಖಂಡರು ಸೋಲಿನ ಹತಾಶೆಯಿಂದ ಈ ರೀತಿ ಮಾತಾಡುತ್ತಿದ್ದಾರೆ, ಶಿವರಾಜ ತಂಗಡಗಿ ಬಿಜೆಪಿ ಸಚಿವರಾಗಿದ್ದಾಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎನ್ನುತ್ತಿದ್ದು, ಈಗ ಮೋದಿಗೆ ಹೇಳುತ್ತಿದ್ದಾರೆ,ಮುಂದೆ ಜನರೇ ಅವರಿಗೆ ಹೊಡೆಯಲಿದ್ದಾರೆ ಮಾತಿನಲ್ಲಿ ಎಚ್ಚರವಿರಲಿ ಎಂದರು ಅಸದೋಕ್

ಬ್ರ್ಯಾಂಡ್‌ ಬೆಂಗಳೂರು ಬಾಂಬ್‌ ಬೆಂಗಳೂರು ಆಗಿದೆ. ಈಗ ಎಲ್ಲರೂ ನೀರಿಲ್ಲದೆ ವಲಸೆ ಹೋಗಿ ಬಾಯ್‌ ಬೆಂಗಳೂರು ಆಗುತ್ತಿದೆ ಎಂದು ಅಶೋಕ್ ಮೂದಲಿಸಿದರು.

ಲೋಕಸಭೆ ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳು ಇರುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಹೇಳಿದ್ದಾರೆ, ಉಚಿತ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ಮನೆ ಸೇರುವುದಂತೂ ಖಚಿತ, ನರೇಂದ್ರ ಮೋದಿ ಹ್ಯಾಟ್ರಿಕ್‌ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು ಅಶೋಕ್.

ವಾರ್ತಾ ಇಲಾಖೆಯಲ್ಲಿ ಹೇಮಂತ್‌ ನಿಂಬಾಳ್ಕರ್‌ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಇದೇ ವೇಳೆ ಪ್ರತಿಪಕ್ಷದ ನಾಯಕರು ತಿಳಿಸಿದರು.