ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ: 3,454 ಕೋಟಿ ರೂ ಬರ ಪರಿಹಾರ ಬಿಡುಗಡೆ

ಬೆಂಗಳೂರು: ಬರ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ, ರಾಜ್ಯದ ಜನತೆ ರೋಸಿ ಹೋಗಿದ್ದಾರೆ. ಹಾಗಾಗಿ ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರ್ಕಾರ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು,ಕೊನೆಗೂ ಜಯ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರ ಬರ ಪರಿಹಾರದ ವಿಚಾರವಾಗಿ ಸಾಕಷ್ಟು ಬಾರೀ ಕೇಂದ್ರದ ಮೊರೆ ಹೋಗಿದ್ದು,ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 18,174 ಕೋಟಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ ಇಟ್ಟಿತ್ತು.ನಂತರ ಕೇಂದ್ರದ ತಂಡ ಬಂದು ಬರ ಅಧ್ಯಯನ ನಡೆಸಿ ಹೋಗಿತ್ತು. ಆದರೆ, ಪರಿಹಾರ ಬಿಡುಗಡೆಯಾಗಲೇ ಇಲ್ಲ.

ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದರಿಂದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೊರೆ ಇಟ್ಟಿತ್ತು.

ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್​ನಲ್ಲಿ  ಒಪ್ಪಿಕೊಂಡಿತ್ತು.

ಅದರಂತೆ ಕೇಂದ್ರ ಸರ್ಕರ ಬರ ಪರಿಹಾರ ಘೋಷಣೆ ಮಾಡಿದ್ದು, ಇದೀಗ ಕೇಂದ್ರ ಸರ್ಕಾರ 3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇದೇ ವೇಳೆ ತಮಿಳುನಾಡಿಗೆ 275 ಕೋಟಿ ನೆರೆ ಪರಿಹಾರ ಘೋಷಣೆ ಮಾಡಿದೆ.

ಈ ಬಗ್ಗೆ ಎಕ್ಸ್‌ ನಲ್ಲಿ ಕೇಂದ್ರದ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ತೀವ್ರ ಬರ ಇದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ಸಂಕಷ್ಡ ಕಾಲದಲ್ಲೂ ಕರ್ನಾಟಕದ ಜನರ ಪರವಾಗಿ ತೀರ್ಮಾನ ತೆಗೆದುಕೊಂಡಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕಳಕಳಿ ತೋರಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ನಿರಂತರವಾಗಿ ಈ ಬಗ್ಗೆ ಅಪಪ್ರಚಾರ ಮಾಡದೇ ಆರು ತಿಗಳ ಹಿಂದೆಯೇ ರೈತರಿಗೆ ಪರಿಹಾರ ಒದಗಿಸಿದ್ದರೆ ರೈತರ ಬದುಕು ಸ್ವಲ್ಪನಾದರು ಸುಧಾರಿಸುತ್ತಿತ್ತು ಎಂದು ಟೀಕಿಸಿದ್ದಾರೆ.