ಭಾವನೆ ವೃದ್ಧಿಸಿಕೊಳ್ಳುವವನೇ ಕಲಾವಿದ

-ಜಿ.ಆರ್. ಸತ್ಯಲಿಂಗರಾಜು
ಕಲಾವಿದ ಶ್ರೇಷ್ಠ ಎನಿಸಿಕೊಳ್ಳಲು ಪಂಚ ಸೂತ್ರ ತಿಳಿದಿರಬೇಕಾದಂತೆ, ಪಾತ್ರದಲ್ಲಿ ತಲ್ಲೀನನಾಗಲು ಭಾವನೆಗಳ ಅಭಿವೃದ್ಧಿ ಮಾಡಿಕೊಳ್ಳುತ್ತಿರಬೇಕು.
ಈ ಭಾವನಾವೃದ್ಧಿಗೆ ಎರಡು ಕಾರ್ಯ ಮಾಡಬೇಕು.
ಅವೆಂದರೆ
೧. ವೀಕ್ಷಣೆ/ಅವಲೋಕನ ಶಕ್ತಿ ಹೆಚ್ಚಿಸಿಕೊಳ್ಳಬೇಕು: ಅಂದರೆ ಬಗೆಬಗೆ ವಸ್ತು, ಜನ, ದೃಶ್ಯ ವಿಚಾರಗಳ ಬಗ್ಗೆ ಉತ್ಸುಕತೆ ಹೆಚ್ಚಿಸಿಕೊಂಡಷ್ಟೂ, ಅವಲೋಕನ ಶಕ್ತಿ ಹೆಚ್ಚುತ್ತೆ. ಶ್ರದ್ಧೆಯಿಂದ ವೀಕ್ಷಿಸುತ್ತಿದ್ದರೆ ಉತ್ಸುಕತೆ ಹೆಚ್ಚುತ್ತಾ ಹೋಗುತ್ತೆ.
೨. ಮನದಲ್ಲಿ ನಿಲ್ಲುವಿಕೆ: ಅಂದರೆ, ಕುತೂಹಲದಿಂದ ನೋಡಿದ್ದನ್ನ ಕಲಾವಿದರು ಮರೆಯಬಾರದು. ನೆನಪಲ್ಲಿ ಇಟ್ಟುಕೊಂಡಿರಬೇಕು. ಇಂಥ ಜ್ಞಾಪಕಶಕ್ತಿ, ಏಕಾಗ್ರತೆ, ಆರೋಗ್ಯ., ಇವುಗಳನ್ನ ಕಾಯ್ದುಕೊಳ್ಳಲು ಯೋಗಾಭ್ಯಾಸ ನಿರಂತರ ಕಸರತ್ತು ತಾಲೀಮು ಮಾಡಬೇಕು.
ಸಿನಿಮಾ ಗೆಲುವು ಸೋಲಿಗೆ ನಟನೆಯೂ ಆಧಾರ. ಕತೆ ಟೇಕಿಂಗ್ ಇತ್ಯಾದಿ ಎಲ್ಲವೂ ಚೆನ್ನಾಗಿದ್ದರೂ ನಟನೆಯೇ ಪೇಲವವಾಗಿದ್ದರೆ ಸಿನಿಮಾ ಸೋಲುತ್ತೆ, ಹಾಗೆಯೇ ಉಳಿದವೆಲ್ಲ ಸುಮಾರು ಎನಿಸಿದರೂ, ನಟನೆ ಹೈಕ್ಲಾಸ್ ಎಂಬ ಅಭಿಪ್ರಾಯ ಬಂದರೆ ಸಿನಿಮಾ ಗೆದ್ದುಬಿಡುವುದೂ ಇದೆ.
ಅಭಿನಯ ಸೊರಗಿದರೆ ಛಾಯಾಗ್ರಾಹಕನ ಕೈಚಳಕ, ನಿರ್ದೇಶಕನ ಕನಸು ಮಣ್ಣುಗೂಡುತ್ತೆ. ಹೀಗಾಗಿ ಕಲಾವಿದರು ‘ಅಭಿನಯ’ದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು.
ಹಾವಭಾವಗಳು ಪೂರ್ವಿಕರಿಂದ ಬಂದಿದ್ದು ಅರವತ್ತನಾಲ್ಕು ಕಲೆಗಳು. ಇದರಲ್ಲಿ ಅಭಿನಯ ಕಲೆ ನಾಲ್ಕು ಪ್ರಕಾರಗಳಲ್ಲಿದೆ. ಈ ನಾಲ್ಕು ಪ್ರಕಾರ ನೋಡುವ ಮುನ್ನ ಕಲಾವಿದ ಯಾರೇ ಆಗಿರಲಿ, ತನ್ನ ಅಭಿನಯದಲ್ಲಿ ಹಾವಭಾವಗಳನ್ನು ಒಗ್ಗೂಡಿಸಿಕೊಳ್ಳಲೇಬೇಕಾದ್ದು ಅಗತ್ಯ.