ಮೈಸೂರು: ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಶ್ರೀಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೊಸವರ್ಷದ ಪ್ರಯುಕ್ತ ಜನವರಿ ಒಂದರಂದು ಲಾಡು ವಿತರಣೆಯಾಗಲಿದೆ.
ಜನವರಿ ಒಂದರಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆಯವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತಾದಿಗಳಿಗೆ ಪ್ರೊ.ಭಾಷ್ಯಂ ಸ್ವಾಮೀಜಿ ವಿತರಿಸಲಿದ್ದಾರೆ.
ಎರಡು ಲಕ್ಷ ಲಡ್ಡು ವಿತರಣೆಗೆ ದೇವಸ್ಥಾನದ ವತಿಯಿಂದ ಭರದ ಸಿದ್ದತೆ ನಡೆಯುತ್ತಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಶ್ರೀಯೋಗಾ ನರಸಿಂಹ ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅಂದು ಬೆಳಿಗ್ಗೆ 4ಗಂಟೆಯಿಂದ ಶ್ರೀಯೋಗಾನರಸಿಂಹಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಶ್ರೀರಂಗಕ್ಷೇತ್ರ, ಮಧುರೈಕ್ಷೇತ್ರ ಹಾಗೂ ಶ್ರೀವಿಲ್ಲಿ ಪುತ್ತೂರು ಎಂಬ ದಿವ್ಯ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಹಾಗೂ ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮಾರ್ಚನೆ ನಡೆಯಲಿದೆ.
ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಉತ್ಸವ ನಡೆಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮ ಪ್ರೊ.ಭಾಷ್ಯಂ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ನಡೆಯಲಿದೆ
ಈ ವರ್ಷ ಅಂದಾಜು (2000)ಗ್ರಾಂ ತೂಕದ (10,000) ಲಡ್ಡುಗಳು ಹಾಗೂ 200ಗ್ರಾಂ ತೂಕದ 2ಲಕ್ಷ ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ,ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲಡ್ಡು ಪ್ರಸಾದ ತಯಾರಿಯನ್ನು ವಿಶೇಷವಾಗಿ 6ಮಂದಿ ನುರಿತ ಬಾಣಸಿಗರು ಡಿ.20ರಿಂದ ಪ್ರಾರಂಭಿಸಿದ್ದು 31ರವರೆಗೂ ಈ ಕಾರ್ಯ ನಡೆಯುತ್ತದೆ.
ಲಡ್ಡು ತಯಾರಿಸಲು 50ಕ್ವಿಂಟಾಲ್ ಕಡಲೆಹಿಟ್ಟು, 100ಕ್ವಿಂಟಾಲ್ ಸಕ್ಕರೆ, 4000ಲೀಟರ್ ಖಾದ್ಯ ತೈಲ, 200ಕೆಜಿ ಗೋಡಂಬಿ, 200ಕೆಜಿ ಒಣದ್ರಾಕ್ಷಿ, 100ಕೆಜಿ ಬಾದಾಮಿ, 200ಕೆಜಿ ಡೈಮಂಡ್ ಸಕ್ಕರೆ, 500ಕೆಜಿ ಬೂರಾ ಸಕ್ಕರೆ, 10ಕೆಜಿ ಪಿಸ್ತಾ, 20ಕೆಜಿ ಏಲಕ್ಕಿ, 20ಕೆಜಿ ಜಾಕಾಯಿ ಜಾಪತ್ರೆ, 5ಕೆಜಿ ಪಚ್ಚ ಕರ್ಪೂರ, 100ಕೆಜಿ ಲವಂಗಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಲೋಕಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ವಿಶ್ವಭ್ರಾತೃತ್ವ, ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

