ಮೈಸೂರು:ಹೊಸ ವರ್ಷಾಚರಣೆ ಪ್ರಯುಕ್ತ ಡಿ. 31ರ ರಾತ್ರಿ ಮೈಸೂರಿನ ಅರಮನೆ ಆವರಣದಲ್ಲಿ ಪಟಾಕಿ, ಬಾಣ ಬಿರುಸು ಪ್ರದರ್ಶನ ಇರುವುದಿಲ್ಲ.
ಈ ಬಗ್ಗೆ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ಡಿಸೆಂಬರ್ 28 ರಿಂದ ಜ.7ರವರೆಗೆ ರಾತ್ರಿ 10ರಿಂದ ಮುಂಜಾನೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ.
ಹಾಗಾಗಿ ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಪ್ರಯುಕ್ತ ನಡೆಸಲು ಉದ್ದೇಶಿಸಿದ್ದ ಪೊಲೀಸ್ ಬ್ಯಾಂಡ್, ಶಬ್ದರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮಗಳನ್ನು ಈ ಬಾರಿ ರದ್ದು ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತೀ ದಿನ ಸಂಜೆ 6.30ಕ್ಕೆ ಅರಮನೆ ವೀಕ್ಷಣೆ ಅಂತ್ಯಗೊಳ್ಳುತ್ತದೆ. ರಾತ್ರಿ 8.30ಕ್ಕೆ ಫಲಪುಷ್ಪ ಪ್ರದರ್ಶನ ಬಂದ್ ಆಗುವುದರಿಂದ ನಮ್ಮಲ್ಲಿ ಕರ್ಫ್ಯೂ ಆದೇಶ ಉಲ್ಲಂಘನೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹೊಸ ವರ್ಷಾಚರಣೆ ದಿನ ರಾತ್ರಿ ಅರಮನೆ ಆವರಣದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದಿದ್ದಾರೆ.

