ಮೈಸೂರು:ನಗರದಲ್ಲೂ ಮಂಗಳವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ ಖಂಡಿತಾ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಚ್ಚರಿಸಿದ್ದಾರೆ.
ನೂತನ ವರ್ಷಾಚರಣೆಗೆ ಸರ್ಕಾರ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಡಾ ಚಂದ್ರಗುಪ್ತ ಅವರು ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದರು.
ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ. ಡಿಸೆಂಬರ್ 30, 31 ಹಾಗೂ ಜನವರಿ 1, 2 ರಂದು ಅನ್ವಯವಾಗುವಂತೆ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಜಾರಿಯಾಗಲಿದೆ. ನಿಯಮ ಮೀರಿ ಪಾರ್ಟಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಪಾರ್ಟಿ ಆಯೋಜಕರು, ಪಾರ್ಟಿಯಲ್ಲಿ ಭಾಗವಹಿಸುವವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ನಿಯಮ ಪಾಲಿಸಿ ಸೊಂಕು ಹರಡದಂತೆ ಎಚ್ಚರ ವಹಿಸಿ ಎಂದು ಡಾ. ಚಂದ್ರಗುಪ್ತ ಮನವಿ ಮಾಡಿದರು.
ಸ್ವಯಂ ಸೇವಕರಿಗೆ ಗುರುತಿನ ಚೀಟಿ: ಕೊರೊನಾ ನಿಯಂತ್ರಣಕ್ಕಾಗಿ ಮೈಸೂರು ಪೊಲೀಸರು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ.
ಸಾರ್ವಜನಿಕರ ಸಹ ಭಾಗಿತ್ವದೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದೆ ಬರುವವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ.
ಕೋವಿಡ್ ಮಾರ್ಗಸೂಚಿ ಅನುಷ್ಠಾನ ಪ್ರತಿನಿಧಿ ಎಂಬ ಗುರುತಿನ ಚೀಟಿಯನ್ನು ಪೊಲೀಸ್ ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ ಎಂದು ಇದೇ ವೇಳೆ ಚಂದ್ರಗುಪ್ತ ಮಾಹಿತಿ ನೀಡಿದರು.
ಪ್ರತಿಯೊಂದು ಪಲೀಸ್ ಠಾಣೆಯಲ್ಲಿ 200 ಮಂದಿ ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಈ ರೀತಿಯ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.

