ಪಾದಯಾತ್ರೆ ಕೈ ಬಿಡಿ:ಎಸ್.ಟಿ.ಎಸ್ ಮನವಿ

ಮೈಸೂರು: ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಳಸಬೇಕೆಂದು ಕಾಂಗ್ರೆಸ್ ನಾಯಕರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಸೊಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಿ ಎಂದು ಕೋರಿದರು.

ಕೊರೊನಾ, ಒಮಿಕ್ರಾನ್ ಪ್ರಕರಣಗಳು ನಮ್ಮ ರಾಜ್ಯ, ಬೇರೆ ರಾಜ್ಯಗಳು, ವಿದೇಶದಲ್ಲೂ ಹೆಚ್ಚಾಗಿದೆ.ಎರಡನೇ ಅಲೆಯಲ್ಲಿ ಸಾಕಷ್ಟು ಅನಾಹುತ ಆಗಿದೆ. ಮೂರನೇ ಅಲೆ ಬರಬಾರದು. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಬೇಕು ಎಂದು ಹೇಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ಗೆ ಮಾಡಲು ಏನೂ ಕೆಲಸ ಇಲ್ಲ,ಇಷ್ಟು ವರ್ಷ ಅವರು ಏನೂ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಯೋಜನೆ ಬಗ್ಗೆ ಮಾತನಾಡಲಿಲ್ಲ.ಈಗ ರಾಜಕೀಯ ಕಾರಣಕ್ಕೆ ಚುನಾವಣೆ ಗಿಮಿಕ್. ಇದು ಜನರಿಗೆ ಗೊತ್ತಗುತ್ತದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಶೇಖರ್, ಕೇಂದ್ರ ಹಾಗೂ ತಜ್ಞರ ಸಲಹೆ ಮೇರೆಗೆ  ನಿರ್ಧಾರ ಕೈಕೊಳ್ಳಲಾಗುತ್ತದೆ. ಅವರು ಕಠಿಣ ಕ್ರಮ ಸೇರಿ ಏನೇ ಸಲಹೆ ಕೊಟ್ಟರು ಪಾಲಿಸುತ್ತೇವೆ ಎಂದು ‌ಹೇಳಿದರು.

ಸದ್ಯಕ್ಕೆ ಬೇರೆ ರಾಜ್ಯದಷ್ಟು ನಮ್ಮಲ್ಲಿ ಸಮಸ್ಯೆಯಾಗಿಲ್ಲ. ಜನರು ಸಹಕಾರ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ತಜ್ಞರ ಜೊತೆ ಸಭೆ ನಡೆಯುತ್ತಿದೆ. ಎರಡನೇ ಅಲೆಯಿಂದ ಆದ ಅನಾಹುತದಿಂದ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದರು.