ಮೈಸೂರು: ಮೇಕೆದಾಟು ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆ ಕೇವಲ ಪೊಲಿಟಿಕಲ್ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಟು ಟೀಕೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ನೀರಾವರಿ ವಿಷಯದಲ್ಲಿ ಮೊದಲಿಂದಲೂ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಪಕ್ಷವಾದ್ದರಿಂದ ಕಾಂಗ್ರೆಸ್ ಎಂದೂ ಕಾವೇರಿ ವಿಷಯದಲ್ಲಿ ರಾಜ್ಯದ ಪರ ನಿಲ್ಲಲೇ ಇಲ್ಲ ಎಂದು ಕೆಲ ಉದಾಹರಣೆಗಳ ಸಮೇತ ವಿವರಿಸಿದರು.
ಕಾಂಗ್ರೆಸ್ʼನವರು ಮಾಡುವ ಪಾದಯಾತ್ರೆಗೆ ನಾನೇಕೆ ಹತಾಶನಾಗಲಿ? ನಾನು ರಾಜ್ಯದ ಜನತೆಯ ಮುಂದೆ ಇಟ್ಟಿರುವ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದು ಒತ್ತಾಯಿಸಿದರು.
ಟ್ವೀಟ್ʼನಲ್ಲಿ ನಾನು ಪ್ರಸ್ತಾಪ ಮಾಡಿರುವ ಅಂಶಗಳ ಬಗ್ಗೆ ಅವರು ಉತ್ತರ ಕೊಡಲಿ. ಅದರ ಹೊರತಾಗಿ ಯೋಜನೆಯ ಕ್ರೆಡಿಟ್ ಪಡೆಯುವ ಅಗತ್ಯ ನನಗಿಲ್ಲ. ದೇವೇಗೌಡರು ರಾಜ್ಯಕ್ಕಾಗಿ ಎಷ್ಟೆಲ್ಲಾ ಮಾಡಿದ್ದಾರೆ, ಅವರು ಎಂದಾದರೂ ಕ್ರೆಡಿಟ್ ಕ್ಲೈಮ್ ಮಾಡಿದ್ದಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕಾವೇರಿ ನೀರಿನ ಹೋರಾಟಕ್ಕೆ ಕಾಂಗ್ರೆಸ್ ಕೊಡುಗೆ ಏನು? ಇವರು ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡಿಸಲು ಈ ಪಾದಯಾತ್ರೆ ಮಾಡುತ್ತಿದ್ದಾರೋ ಅಥವಾ ಈ ಪಾದಯಾತ್ರೆ ಮೂಲಕ ಪ್ರಚಾರ ಪಡೆಯಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೋ? ಎನ್ನುವುದೇ ನನ್ನ ಪ್ರಶ್ನೆ ಎಂದರು.
ಸಿದ್ದರಾಮಯ್ಯ ಅವರು ಭಾನುವಾರದಂದು ಕಾವೇರಿ ಇತಿಹಾಸದ ಅರಿವು ಇಲ್ಲದೆ ಒಂದು ಟ್ವೀಟ್ ಮಾಡಿದ್ದಾರೆ.
1968ರಲ್ಲೇ ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಮಾಡೋಕೆ ಹೋಗಿದ್ದರಂತೆ. ಆಗ ಯಾವುದೋ ಕೋರ್ಟ್ ವ್ಯಾಜ್ಯ ಇತ್ತಂತೆ, ಅದಕ್ಕೆ ಯೋಜನೆ ನಿಂತು ಹೋಯಿತಂತೆ. ಸಿದ್ದರಾಮಯ್ಯ ಅವರು ಆ ಎಲ್ಲ ವಿವರಗಳನ್ನು ಜನರ ಮುಂದೆ ಇಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಹಾಸನದಿಂದ ಬಂದವರಿಗೆ ಅಧಿಕಾರ ಕೊಟ್ಟು ಸಹಿಸಿಕೊಂಡಿದ್ದೇವೆ. ಈಗ ಈ ಟೀಕೆಗಳನ್ನು ಸಹಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಖಾರವಾಗಿ ಮಾಜಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.
ನಮ್ಮ ದುಡಿಮೆ ಹಾಗೂ ಜನರ ಆಶೀರ್ವಾದದಿಂದ ನಮಗೆ ಅಧಿಕಾರ ಸಿಕ್ಕಿದೆ ವಿನಾ ಇವರಿಂದ ಅಲ್ಲ. ಆ ಜನರ ಕಷ್ಟ ಸುಖ ನೋಡಿದ್ದಕ್ಕೆ ಮತ ನೀಡಿದರು. ಇವರು ಅಧಿಕಾರ ಕೊಟ್ಟರಾ ನಮಗೆ ಎಂದು ಅವರು ಪ್ರಶ್ನಿಸಿದರು.
ಅವರು ಕಲ್ಲುಗಳನ್ನೇ ಜೀರ್ಣ ಮಾಡಿಕೊಂಡವರು ನನ್ನ ಟೀಕೆಗಳನ್ನು ಜೀರ್ಣ ಮಾಡಿಕೊಳ್ಳಲಾರರೆ? ಕನಕಪುರದ ಸುತ್ತಮುತ್ತ ಇರುವ ಕಲ್ಲು ಬಂಡೆಗಳನ್ನೆ ನುಂಗಿ ಜೀರ್ಣ ಮಾಡಿಕೊಂಡಿದ್ದಾರೆ ಇನ್ನು ನನ್ನ ಹೇಳಿಕೆ ಅವರಿಗೆ ಜೀರ್ಣ ಅಗಲ್ಲವೆ? ಎಂದು ಡಿಕೆಶಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಈ ಪಾದಯಾತ್ರೆ ಸಂಪೂರ್ಣವಾಗಿ ಪೊಲಿಟಿಕಲ್ ಗಿಮಿಕ್. ಆ ಫೋಟೋಶೂಟ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ರೀತಿಯಲ್ಲಿದೆ. ಅಲ್ಲದೆ, ಪ್ರಶ್ನೆ ಎತ್ತಿದ ನನ್ನನ್ನು ಸಾಹಿತಿಗಳಿದ್ದೀರಿ, ಬುದ್ಧಿವಂತರಿದ್ದೀರಿ ಅನ್ನುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

