ಕೊರೊನ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ -ಡಿಕೆಶಿ

ಬೆಂಗಳೂರು;ಕೊರೊನ ನಿಯಮಗಳನ್ನು ಪಾಲಿಸಿಯೇ ನಾವು  ಪಾದಯಾತ್ರೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ‌ಅವರು,ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಜನರಿಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದಿಲ್ಲ. ತನ್ನ ಪಕ್ಷದ ಹಿತದೃಷ್ಟಿಗಾಗಿ ಕಾನೂನು ಮಾಡುತ್ತಿದೆ ಎಂದು ಆರೋಪಿಸಿದರು.

ಮಂಗಳವಾರ ರಾತ್ರಿ ನಡೆದ ಸಭೆಯನ್ನು ನಾನು ಗಮನಿಸಿದ್ದೇನೆ. ಅದು ಕೊರೊನಾ ಕರ್ಫ್ಯೂ ಅಥವಾ ಕೊರೊನಾ ಲಾಕ್‍ಡೌನ್ ಅಲ್ಲ. ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ ಎಂದು ಟೀಕಿಸಿದರು.

ಇತ್ತೀಚಿನ ಚುನಾವಣೆಗಳಲ್ಲಿ ಜನ ಬಿಜೆಪಿಗೆ ಕಠಿಣ ಉತ್ತರ ನೀಡಿದ್ದಾರೆ. ಅದಕ್ಕಾಗಿ ಸರ್ಕಾರ ಪಕ್ಷದ ಹಿತದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆಯೇ ಹೊರತು ಇದು ಜನರಿಗಾಗಿ ತಂದ ನಿಯಮಗಳಲ್ಲ ಎಂದು ಹೇಳಿದರು.

ನಮ್ಮ ಮೇಲಿನ ದ್ವೇಷಕ್ಕಾಗಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರದಿಂದ ರೂಪಿಸಿದ ನಿಯಮಗಳು ಎಂದು ಕಿಡಿಕಾರಿದರು.

ಸರ್ಕಾರ ಯಾವುದೇ ಪ್ರತಿಭಟನೆ, ರ್ಯಾಲಿ, ಧರಣಿ ಮಾಡಬೇಡಿ ಎಂದು ಹೇಳಿದೆ. ನಾವು ಅದ್ಯಾವುದನ್ನೂ ಮಾಡುವುದಿಲ್ಲ. ನೀರಿಗಾಗಿ ನಡೆಯುತ್ತೇವೆ ಎಂದರು.

ರಾಜ್ಯದ ಹಿತಕ್ಕಾಗಿ, ರೈತರ ಅನುಕೂಲಕ್ಕಾಗಿ, ಬೆಂಗಳೂರಿನ ಜನರಿಗೆ ಕಾವೇರಿ ನೀರು ಕುಡಿಸಲು ಪ್ರಾರ್ಥನೆ ಮಾಡಿಕೊಳ್ಳುವ ಸಲುವಾಗಿ ನಾವು ನಡೆಯುತ್ತಿದ್ದೇವೆ. ನಮ್ಮದು ನೀರಿಗಾಗಿ ನಡಿಗೆ ಕಾರ್ಯಕ್ರಮ ಎಂದು ಡಿಕೆಶಿ ಹೇಳಿದರು.

ಕೋವಿಡ್ ಶಿಷ್ಟಾಚಾರ ನಿಯಮಗಳನ್ನು ನಾವು ಗೌರವಿಸುತ್ತೇವೆ ಹಾಗೂ ಪಾಲಿಸುತ್ತೇವೆ. ಹಾಗೆಂದ ಮಾತ್ರಕ್ಕೆ ಮನೆಯಿಂದ ಹೊರಗೆ ಯಾರೂ ಓಡಾಡಬಾರದು ಎಂಬ ನಿಯಮವೇನಿಲ್ಲ ಎಂದರು.

 ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಮಾರ್ಗವನ್ನು ಇಂದು ಪರಿಶೀಲನೆ ಮಾಡುತ್ತಿದ್ದೇವೆ. ನಗರ ವ್ಯಾಪ್ತಿಯಲ್ಲಿ ಯಾವ ರೀತಿಯ ಶಿಷ್ಟಾಚಾರ ಪಾಲನೆ ಮಾಡಬೇಕೆಂಬುದನ್ನು ಪಕ್ಷದ ನಾಯಕರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ವೀಕೆಂಡ್ ಲಾಕ್‍ಡೌನ್, ನೈಟ್ ಕರ್ಫ್ಯೂ ಮೂಲಕ ಜನಸಾಮಾನ್ಯರ ಜೀವ ಹಿಂಡುತ್ತಿದೆ. ವ್ಯಾಪಾರಿಗಳು, ವರ್ತಕರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇರುವವರು, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ಕಿರಾಣಿ ಅಂಗಡಿಯವರು,  ಉದ್ಯಮಿಗಳು ಎಲ್ಲರೂ ನಲುಗಿ ಹೋಗಿದ್ದಾರೆ. ಅವರ ಶಾಪ ತಡೆದುಕೊಳ್ಳಲಾಗದಷ್ಟು ತೀವ್ರವಾಗಿದೆ. ಸರ್ಕಾರವೇ ಜನರನ್ನು ಕೊಲೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.