ನಾನೂ ಸಿದ್ದರಾಮಯ್ಯ ಇಬ್ರೇ ನಡಿತೇವೆ -ಡಿಕೆಶಿ

ಬೆಂಗಳೂರು: ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡಿಗೆ ಮಾಡುತ್ತೇವೆ.ಒಂದು ವೇಳೆ ಸರ್ಕಾರ ಸಾರ್ವಜನಿಕರು ನಡಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ, ನಾನು, ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು,ರಾಜ್ಯ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನೀರಿಗಾಗಿ ಜ. 9ರಿಂದ 19 ರವರೆಗೂ ನಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಪಕ್ಷಬೇಧ ಮರೆತು, ಎಲ್ಲ ಪಕ್ಷದ ನಾಯಕರು, ಸಂಘಟನೆಗಳಿಗೆ ಆಹ್ವಾನ ನೀಡಿದ್ದೇವೆ, ಜನರು ಕೂಡ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹಾಗೂ ಕೆಲವು ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ರೂಪಿಸಿ, ಕೋವಿಡ್ ನೆಪದಲ್ಲಿ ನಿರ್ಬಂಧ ಹಾಕಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.

ರಾಜ್ಯದ ಆರೂವರೆ ಕೋಟಿ ಜನರಲ್ಲಿ 3 ಸಾವಿರ ಪ್ರಕರಣ ದಾಖಲಾಗಿದೆ ಎಂದು ಹೇಳಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ ನಡೆಯಬಾರದೆಂದು ನಿರ್ಬಂಧ ಹಾಕಿ ಜ. 19 ರ ಬೆಳಗೆ 5 ರವರೆಗೂ ಕರ್ಫ್ಯೂ ಹಾಕಿದ್ದಾರೆ‌ ಎಂದು ದೂರಿದರು.

ಪಕ್ಷದಲ್ಲಿ ನಾವೆಲ್ಲ ಚರ್ಚಿಸಿದ್ದು, ಈ ನಡಿಗೆ ರಾಜ್ಯದ ಹಿತಕ್ಕಾಗಿಯೇ ಹೊರತು ರಾಜಕಾರಣಕ್ಕೆ ಅಲ್ಲ. ರಾಜ್ಯದ ಹಿತಕ್ಕಾಗಿ ನೀರಿಗಾಗಿ ನಡಿಗೆ ಕಾರ್ಯಕ್ರಮವನ್ನು ಕಾನೂನು ಹಾಗೂ ಕೋವಿಡ್ ನಿಯಮದಂತೆ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜನವರಿ 9 ರಂದು ಬೆಳಗ್ಗೆ ಈ ಕಾರ್ಯಕ್ರಮ ಆರಂಭಿಸಿ, 19 ರಂದು ಬಹಿರಂಗ ಸಭೆ ಮೂಲಕ ಮುಕ್ತಾಯ  ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.