ಲಾಕ್ ಡೌನ್ ಚಿಂತನೆ ಇಲ್ಲ- ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ಸದ್ಯಕ್ಕೆ ಲಾಕ್‍ಡೌನ್ ಮಾಡುವ ಚಿಂತನೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದನ್ನು ಯಾರೂ ತಡೆಗಟ್ಟಲು ಸಾಧ್ಯವಿಲ್ಲ. ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದೇ ಹೊರತು ಎಲ್ಲದಕ್ಕೂ ಲಾಕ್‍ಡೌನ್  ಒಂದೇ ಪರಿಹಾರವಲ್ಲ ಎಂದು ತಿಳಿಸಿದರು.

ಈ ಹಿಂದೆ ಒಂದು ಮತ್ತು 2ನೇ ಅಲೆಯ ಸಂದರ್ಭದಲ್ಲಿ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಜನಸಾಮಾನ್ಯರು ಎಷ್ಟು ಕಷ್ಟಪಟ್ಟರು ಎಂಬ ಅರಿವು ನಮಗಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ಮಾಡುವ ಚಿಂತನೆಯನ್ನೇ ಮಾಡಿಲ್ಲ ಎಂದು ಹೇಳಿದರು.

ಲಾಕ್‍ಡೌನ್ ಕಳೆದು ಹೋಗಿರುವ ನೀತಿ. ಹಾಗಾಗಿ ಇನ್ನುಮುಂದೆ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇರುವುದಿಲ್ಲ. ಆದರೆ 3ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ನಾವು ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ನಮಗೆ ಮೊದಲ ಮತ್ತು 2ನೇ ಅಲೆ ಬಂದಾಗ ಯಾವ ರೀತಿ ಕೋವಿಡ್‍ಗೆ ಚಿಕಿತ್ಸೆ ಕೊಡಬೇಕು ಎಂಬ ಅರಿವು ಇರಲಿಲ್ಲ. ಈಗ ಸಾಕಷ್ಟು ಅನುಭವವಾಗಿದೆ ಎಂದರು.

ಒಂದು ಕಡೆ ಕೋವಿಡ್ ಲಸಿಕೆ ಇದ್ದೇ ಇದೆ ಮತ್ತೊಂದು ಕಡೆ ಮಾತ್ರೆಗಳು ಸಹ ಬರುತ್ತಿದೆ. ರೂಪಾಂತರಿಯನ್ನು ನಾವು ಧೈರ್ಯವಾಗಿ ಎದುರಿಸಲು ಸಿದ್ದರಾಗಿದ್ದೇವೆ ಎಂದು ಹೇಳಿದರು.

ಮೂರನೇ ಅಲೆ ಬಂದಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ನಾವು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ವಿಶ್ವವ್ಯಾಪಿಯಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಯಾರೂ ತಲೆಕೆಡಿಸಿಕೊಳ್ಳಬಾರದು ಎಂದು ಸುಧಾಕರ್  ತಿಳಿಸಿದರು.

ಜನತೆಗೆ ಅತ್ಯುತ್ತಮವಾಗಿ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಪಾಸಿವಿಟಿದರ ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಹೆದರಬೇಕಾದ ಅಗತ್ಯವಿಲ್ಲ ಎಂದು ದೈರ್ಯ ಹೇಳಿದರು.

ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಅದರ ತೀವ್ರತೆ ಕಡಿಮೆ. ನಮ್ಮಲ್ಲಿ ಈಗ ಮುಂದುವರೆದ ವೈದ್ಯಕೀಯ ಚಿಕಿತ್ಸೆ ಇರುವುದರಿಂದ ಇದರ ಬಗ್ಗೆ ಹೆಚ್ಚು ಚಿಂತೆಗೀಡಾಗಬೇಕಾದ ಅಗತ್ಯವಿಲ್ಲ ಎಂದರು.

ಯಾರು ಲಸಿಕೆ ಪಡೆದಿಲ್ಲವೋ ಅಂತವರು ತಕ್ಷಣವೇ‌‌‌‌ ಲಸಿಕೆ ಪಡೆದರೆ  ಸುರಕ್ಷಿತವಾಗಿರುತ್ತೀರಿ,ನಿಮ್ಮ ಕುಟುಂಬವೂ ಸುರಕ್ಷಿತವಾಗಿರುತ್ತದೆ,ಅನಗತ್ಯ ಗೊಂದಲಗಳಿಗೆ ಒಳಗಾಗಬಾರದು ಎಂದು ಸುಧಾಕರ್ ಹೇಳಿದರು.