ಕರ್ಫ್ಯೂ ವೇಳೆ ಅನಗತ್ಯ ಓಡಾಡುವವರ ವಿರುದ್ಧ ಕ್ರಮ -ಡಿಸಿ ಎಚ್ಚರಿಕೆ

ಮೈಸೂರು:ವಾರಾಂತ್ಯ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಯಾವುದೇ ಅಡ್ಡಿ ಯಿಲ್ಲ, ಆದರೆ ಈ ನೆಪದಲ್ಲಿ ಅನಗತ್ಯ ವಾಗಿ ಓಡಾಡುವವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಎಚ್ಚರಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ಐದು ಗಂಟೆವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಹಾಲು, ಹಣ್ಣು-ತರಕಾರಿ, ಔಷಧಿ,ಮಾಂಸ, ದಿನಸಿ ಇನ್ನಿತರ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ಇರುತ್ತದೆ ಎಂದು ಹೇಳಿದ್ದಾರೆ.

ಹೋಟೆಲ್‍ಗಳಲ್ಲಿ ಪಾರ್ಸೆಲ್, ಹೋಂ ಡೆಲಿವರಿ ಹೀಗೆ ಮಾರ್ಗಸೂಚಿಯಲ್ಲಿ ಅವಕಾಶವಿರುವ ಚಟು ವಟಿಕೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.

ಅಗತ್ಯ ವಸ್ತು ಮಾರಾಟ ಮಾಡುವವರು ಹಾಗೂ ಕೊಳ್ಳುವವರು ನಿಯಮ ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದ್ದಾರೆ.

ಅಗತ್ಯ ವಸ್ತು ಕೊಳ್ಳುವ ನೆಪದಲ್ಲಿ ತಮ್ಮ ವಿಳಾಸದಿಂದ ದೂರದ ಪ್ರದೇಶಕ್ಕೆ ಹೋಗಿ ಬರುವ ಪ್ರಯತ್ನ ಮಾಡಬಾರದು. ಹೀಗೆ ಅವಕಾಶವನ್ನು ದುರುಪಯೋಗಪಡಿಸಿ ಕೊಂಡರೆ ಹಾಗೂ ಸುಮ್ಮನೆ ತಿರುಗಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತವೆ ಎಂದು ಡಿಸಿ ಎಚ್ಚರಿಸಿದ್ದಾರೆ.