ಕಾಂಗ್ರೆಸ್ ಸರ್ಕಾರ ವಜಾಕ್ಕೆ ಜೋಗಿ ಮಂಜು ಆಗ್ರಹ

ಮೈಸೂರು:ಪಂಜಾಬ್‌ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುತ್ತಿದ್ದ ವಾಹನಗಳನ್ನು ರೈತರ ರಸ್ತೆ ತಡೆ ಹಿನ್ನೆಲೆಯಲ್ಲಿ ತಡೆದು ಭದ್ರತಾ ಲೋಪ ಎಸಗಿದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ಆಗ್ರಹಿಸಿದ್ದಾರೆ.

ದೇಶದ ಪ್ರಮುಖ ಸಾಂವಿಧಾನಿಕ ಹುದ್ದೆ ಹೊಂದಿರುವ ಪ್ರಧಾನಿಯವರ ಪ್ರವಾಸದ ಬಗ್ಗೆ ಮುಂಚೆಯೇ ರಾಜ್ಯ ಸರ್ಕಾರಕ್ಕೆ ಮಾಹಿತಿ ಇರುತ್ತದೆ. ಹೀಗಾಗಿ, ಮೋದಿ ಅವರು ಸಂಚರಿಸುವ ಮಾರ್ಗವನ್ನು ಸುಗಮ ಸಂಚಾರಕ್ಕಾಗಿ ಅಣಿಗೊಳಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಪಂಜಾಬ್ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಧಾನಿ ಅವರ ಜೀವಕ್ಕೆ ಹಾನಿ ಮಾಡಲು ಸಂಚು ರೂಪಿಸಿತ್ತು. ಹೀಗಾಗಿ, ಕೂಡಲೇ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ಆ ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಭೇಟಿ ಮಾಡಿ ಸ್ವಾಗತಿಸಬೇಕು. ಆದರೆ,ಇಲ್ಲೂ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಗಡಿಯ ಸಮೀಪದಲ್ಲೇ ವಾಹನಗಳನ್ನು ತಡೆದಿರುವುದನ್ನು ನೋಡಿದರೆ ಉದ್ದೇಶಪೂರ್ವಕ ಸಂಚು ಎಂಬುದು ಗೊತ್ತಾಗುತ್ತದೆ ಎಂದು ಜೋಗಿ ಮಂಜು ಆತಂಕ ವ್ಯಕ್ತಪಡಿಸಿದ್ದಾರೆ.