ಬೆಂಗಳೂರು: ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಕೆಲವು ಜವಾಬ್ದಾರಿ ಕೊಟ್ಟಿದ್ದೇವೆ. ಕಳೆದ ಎರಡು ಬಾರಿಯಾದಂತೆ ಈ ಬಾರಿ ಯಾವುದೇ ಲೋಪ ಆಗದ ಹಾಗೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ವಿಶ್ವದಲ್ಲಿ ಅತೀ ವೇಗವಾಗಿ ಹರಡುವ ಪ್ರಭೇದ ಎಂದು ತಿಳಿಸಿದೆ. ಡೆಲ್ಟಾ ಪ್ರಭೇದದ ತೀವ್ರತೆ ಹೆಚ್ಚು, ಒಮೈಕ್ರಾನ್ ತೀವ್ರತೆ ಕಡಿಮೆ ಎಂದು ತಿಳಿಸಿದರು.
ಎರಡು ಡೋಸ್ ಲಸಿಕೆ ಪಡೆದರೆ ಒಮೈಕ್ರಾನ್ ನಿಂದ ತೀವ್ರತರದ ವ್ಯಾಧಿ ಉಲ್ಬಣವಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂದು ಹೇಳಿದರು.
ವಿಶ್ವದಲ್ಲಿ 29 ಕೋಟಿಗೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಡಿಸೆಂಬರ್ 27 ರಿಂದ ಜನವರಿ 2ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸೋಂಕಿತರ ಸಂಖ್ಯೆ ಶೇ 79ರಷ್ಟು ಹೆಚ್ಚಳವಾಗಿದೆ.
ಅಮೆರಿಕಾ, ಯುರೋಪ್, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. WHO ಪ್ರಕಾರ 2022ರ ಜುಲೈ ವೇಳೆಗೆ ಎಲ್ಲಾ ರಾಷ್ಟ್ರಗಳಲ್ಲೂ ಶೇ 70ರಷ್ಟು ಲಸಿಕಾಕರಣ ಪೂರ್ಣವಾಗಬೇಕು. ಆದರೆ ಈವರೆಗೆ 109 ದೇಶಗಳಲ್ಲಿ ಈ ಪ್ರಮಾಣದ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ ಎಂದರು.
ವಿಶ್ವದ ಎಲ್ಲಾ ದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾದರೆ ಮಾತ್ರ ಕೊರೊನಾ ಮಣಿಸಬಹುದು. 6 ತಿಂಗಳ ಹಿಂದೆಯೇ ಭಾರತ ಹಲವು ದೇಶಗಳಿಗೆ ಲಸಿಕೆ ಸರಬರಾಜು ಮಾಡಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ: ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಶೇ.99ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ ಶೇ 80ರಷ್ಟಿದೆ ಎಂದು ವಿವರಿಸಿದರು.
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟ ಅಗತ್ಯ ಇರುವವರಿಗೆ, ಫ್ರಂಟ್ ಲೈನ್ ವರ್ಕರ್ ಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಸುಧಾಕರ್ ತಿಳಿಸಿದರು.
ಭಾರತ 150 ಕೋಟಿ ಡೋಸ್ ಲಸಿಕೆ ನೀಡಿ ಮೈಲುಗಲ್ಲು ಸ್ಥಾಪಿಸಿದೆ. ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿವೆ ಅನ್ನುವುದಕ್ಕೆ ಇದು ಉದಾಹರಣೆ ಎಂದರು.
ವಿದೇಶದಿಂದ ಮತ್ತು ಹೊರ ರಾಜ್ಯದಿಂದ ಬರುವವರ ಬಗ್ಗೆ ನಿಗಾ ಇಡಲಾಗುತ್ತದೆ. ರೈಲಿನ ಮೂಲಕ ಹೊರ ರಾಜ್ಯದಿಂದ ಬರುವವರ ಬಗ್ಗೆ ಕೂಡ ಏರ್ ಸುವಿಧಾ ರೀತಿಯಲ್ಲಿ ನಿಗಾ ಇಡಬೇಕಿದೆ ಎಂದರು.
ಹೊರ ರಾಜ್ಯಗಳಿಂದ ಬರುವವರ ಬಳಿ ಕಡ್ಡಾಯವಾಗಿ ನೆಗೆಟಿವ್ RTPCR ವರದಿ ಇರಬೇಕು. ಮುಖ್ಯಮಂತ್ರಿಗಳ ಮೂಲಕ ಪತ್ರ ಬರೆದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು. ಗಡಿಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ ಎಂದು ಹೇಳಿದರು.
ಕೋವಿಡ್ ಕೇರ್ ಸೆಂಟರ್, ಬಿಬಿಎಂಪಿ ವಲಯದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಕೂಡ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ಏಳು ದಿನ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 10 ಸಾವಿರ ಗೃಹ ವೈದ್ಯರ ನಿಯೋಜನೆ ಮಾಡಲಾಗಿದೆ.
ಯಾರು ಆಸ್ಪತ್ರೆಗೆ ಸೇರಬೇಕು ಎಂಬ ಬಗ್ಗೆ ಡಾ.ರವಿ ಅವರ ತಜ್ಞರ ಸಮಿತಿ ತಿಳಿಸಲಿದೆ. ಮಾರ್ಗಸೂಚಿ, ದಾಖಲು ನೀತಿ ಪ್ರಕಾರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
2 ಡೋಸ್ ಲಸಿಕೆ ತೆಗೆದುಕೊಂಡವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಜೊತೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಸಿದ್ಧವಿರುವವರಿಗೆ ಸ್ವಾಗತವಿದೆ ಎಂದು ಕರೆ ನೀಡಿದರು.
ಪಾದಯಾತ್ರೆ ಮುಂದಕ್ಕೆ ಹಾಕಿ: ಪಾದಯಾತ್ರೆಗೆ ನಾವು ವಿರೋಧ ಮಾಡುತ್ತಿಲ್ಲ. ಆದರೆ ಹಿಂದೆ ಆಡಳಿತ ನಡೆಸಿದವರು, ಮುಖ್ಯಮಂತ್ರಿಯಾಗಿದ್ದವರು ಹಾಗೂ ಅಪಾರ ಅನುಭವ ಇರುವವರು ಈ ಬಗ್ಗೆ ಆಲೋಚಿಸಲಿ ಎಂದು ಇದೇ ವೇಳೆ ಸುಧಾಕರ್ ಕಾಂಗ್ರೆಸ್ ನವರಿಗೆ ಸಲಹೆ ನೀಡಿದರು.
ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗವಾಗಿದೆ. ಪಾದಯಾತ್ರೆಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿ ಎಂದು ಮನವಿ ಮಾಡಿದರು.
ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುವುದು ಕೇವಲ ರಾಜಕೀಯ ಪ್ರೇರಿತ ಎಂದು ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು.

