ಪಂಚ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ 5 ರಾಜ್ಯಗಳ ಚುನಾವನಾ ದಿನಾಂಕವನ್ನು ತಿಳಿಸಿದರು.

ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದೆ.

ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ. ಕೋವಿಡ್-19 ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಮತದಾನದ ಕಾಲಾವಧಿಯನ್ನು 1 ಗಂಟೆ ಹೆಚ್ಚು ವಿಸ್ತರಿಸಿದೆ.

ರಾಜಕೀಯ ಪಕ್ಷಗಳು ಹೆಚ್ಚು ವರ್ಚ್ಯುಯಲ್ ರ್ಯಾಲಿಯತ್ತ ಗಮನ ಹರಿಸಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ತಿಳಿಸಿದ್ದಾರೆ.

ಚುನಾವಣೆ ನಡೆಯಲಿರುವ 5 ರಾಜ್ಯಗಳಲ್ಲಿ ಇಂದಿನಿಂದಲೇ (ಜ. 8) ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.

ಫೆ. 10ರಿಂದ ಮತದಾನ ಪ್ರಾರಂಭವಾಗಿ ಮಾ. 7ವರೆಗೆ ಈ 5 ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮಾ. 10ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.

ಪಂಜಾಬ್, ಗೋವಾ, ಉತ್ತರಾಖಂಡ್ ಗಳಲ್ಲಿ ಫೆ. 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ ಫೆ. 27ರಂದು ಮೊದಲ ಹಂತ ಹಾಗೂ ಮಾ. 3ರಂದು 2ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 7 ಹಂತಗಳ ಮತದಾನ: ಫೆ.10 ರಂದು ಮೊದಲ ಹಂತದ, ಫೆ.14- ದ್ವಿತೀಯ ಹಂತ, ಫೆ.20- ತೃತೀಯ ಹಂತ, ಫೆ. 23-4ನೇ ಹಂತ, ಫೆ.27-5ನೇ ಹಂತ, ಮಾ. 3ರಂದು 6ನೇ ಹಂತ ಹಾಗೂ ಮಾ. 7ರಂದು- 7ನೇ ಹಂತದ ಮತದಾನ ನಡೆಯಲಿದೆ.