ಪಾದಯಾತ್ರೆ ನಿಲ್ಲಿಸಲೆಂದೇ 144 ಸೆಕ್ಷನ್: ಸರ್ಕಾರದ ವಿರುದ್ಧ ಗುಡುಗಿದ ಸಿದ್ದು

ಬೆಂಗಳೂರು:ರಾಮನಗರ ಜಿಲ್ಲೆಗೆ ಸೀಮಿತವಾಗಿ ಸರ್ಕಾರ 144 ಸೆಕ್ಷನ್ ಹೇರಿರುವುದು ನೋಡಿದರೆ ಏನಾದರೂ ಮಾಡಿ ನಮ್ಮ ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂಬ ದುರುದ್ದೇಶ ಹೊಂದಿದೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ‌ ಅವರು, ನಾವು ಭಾನುವಾರ ಪಾದಯಾತ್ರೆ ಪ್ರಾರಂಭಿಸುವುದು ನಿಶ್ಚಿತ, ಸರ್ಕಾರ ನಮ್ಮ ಮೇಲೆ ಏನು ಕ್ರಮ ಜರುಗಿಸುತ್ತದೋ ಜರುಗಿಸಲಿ. ನಾವು ಎಲ್ಲವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಬಿಜೆಪಿಯವರು ಅಧಿಕಾರದಲ್ಲಿ ಇದ್ದಾರೆ. ನಾವು ಕೊರೊನಾ ನಿಯಮಗಳನ್ನು ಅನುಸರಿಸಿಯೇ ಪಾದಯಾತ್ರೆ ಮಾಡುತ್ತೇವೆ. ನಾವು ಕಾನೂನನ್ನು ಗೌರವಿಸುತ್ತೇವೆ, ಆದರೂ ಅವರು ನಮ್ಮನ್ನು ಬಂಧಿಸುತ್ತಾರೆ ಎಂದರೆ ಬಂಧಿಸಲಿ ಬಿಡಿ ಎಂದರು.

ಮೇಕೆದಾಟು ಬಳಿ 144 ಸೆಕ್ಷನ್ ಜಾರಿಯಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಹಾಗೇನಾದರೂ ಜಾರಿ ಮಾಡಿದ್ದರೆ ನಾಲ್ಕೇ ಜನ ಪಾದಯಾತ್ರೆ ಮಾಡ್ತೇವೆ ಎಂದು ಸಿದ್ದು ಸರ್ಕಾರಕ್ಕೆ ಸವಾಲು ಹಾಕಿದರು.

ನಮ್ಮ ಪಾದಯಾತ್ರೆ ಘೋಷಣೆಯಾಗಿ ಎರಡು ತಿಂಗಳಾಯ್ತು. ವಾರಾಂತ್ಯದ ಲಾಕ್ ಡೌನ್ ಘೋಷಣೆ ಆಗಿದ್ದು ಮೊನ್ನೆ ಮೊನ್ನೆ. ಅದೂ ಅಲ್ಲದೆ ರಾಮನಗರ ಜಿಲ್ಲೆಯಲ್ಲಿ ಮಾತ್ರ 144 ಸೆಕ್ಷನ್ ಯಾಕೆ, ಬೇರೆ ಜಿಲ್ಲೆಯಲ್ಲಿ ಏಕಿಲ್ಲ ಎಂದು ಸಿದ್ದರಾಮಯ್ಯ ಕಾರವಾಗಿ ಪ್ರಶ್ನಿಸಿದರು.

ಇದನ್ನೆಲ್ಲ ನೋಡಿದರೆ ಏನಾದರೂ ಮಾಡಿ ನಮ್ಮ ಪಾದಯಾತ್ರೆ ತಡೆಯಬೇಕು ಎಂಬ ಅವರ ದುರುದ್ದೇಶವನ್ನು ತೋರಿಸುತ್ತದೆ. ರಾಮನಗರದಲ್ಲಿ ಗೆಸ್ಟ್ ಹೌಸ್ ಗಳು ಸಿಗದಂತೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.

ಸರ್ಕಾರದ ಜೊತೆ ಸಂಧಾನ ಮಾಡೋಕೇನಿದೆ? ಈ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದಿದೆ. ಅವತ್ತಿಂದ ಏನು ಮಾಡ್ತಿದ್ದಾರೆ.

ಕಾವೇರಿ ಜಲ ವಿವಾದ ಇತ್ಯರ್ಥವಾಗಿದ್ದು 2018ರ ಫೆಬ್ರವರಿಯಲ್ಲಿ. ಅದಾದಮೇಲೆ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕು ಎಂದು ಹೇಳಿದ್ದಾರೆ. ಒಂದು ಸಾಮಾನ್ಯ ವರ್ಷದಲ್ಲಿ ಇಷ್ಟು ನೀರು ಬಿಡೋಣ. ಆದರೆ ಈಗ ಹೆಚ್ಚು ಮಳೆಯಾದ ಕಾರಣ ನೀರು ಸಮುದ್ರಕ್ಕೆ ಹೋಗಿ ವ್ಯರ್ಥವಾಗುತ್ತಿದೆ.

ಒಂದು ಜಲಾಶಯ ನಿರ್ಮಾಣ ಮಾಡಿ ವ್ಯರ್ಥವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದರು ಆಗ ಯಾಕೆ ಯೋಜನೆ ಜಾರಿ ಮಾಡಿಲ್ಲ ಎಂದು ಸಿದ್ದು ಕೇಳಿದರು.

ಈಗ ಸುಪ್ರೀಂ ಕೋರ್ಟ್, ಕಾವೇರಿ ಜಲ ಪ್ರಾಧಿಕಾರ, ಹಸಿರು ನ್ಯಾಯಾಧೀಕರಣ ಎಲ್ಲಿಯೂ ಯೋಜನೆ ಜಾರಿ ಮಾಡದಂತೆ ತಡೆ ನೀಡಿಲ್ಲ. ಎರಡೂ ಕಡೆ ಬಿಜೆಪಿಯವರ ಸರ್ಕಾರವೇ ಇದೆ, ಅಣೆಕಟ್ಟು ನಿರ್ಮಾಣಕ್ಕೆ ಬೇರಾವ ತೊಂದರೆ ಇದೆ ಹೇಳಲಿ ಸಿದ್ದು ಆಗ್ರಹಿಸಿದರು.

ಈ ಸರ್ಕಾರ ಏನು ಮಾಡಿದೆ ಹೇಳಲಿ. ತಾವು ಏನನ್ನು ಮಾಡದೆ ನಮ್ಮ ಮೇಲೆ ಆರೋಪ ಮಾಡೋದಕ್ಕೆ ಅರ್ಥ ಇಲ್ಲ. ಹಿಂದೆ ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಅವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದರಲ್ಲ ಆಗೇನು ಮಾಡಿದ್ರು? ಈಗಿನ ಸರ್ಕಾರ ಏನು ಮಾಡಿದೆ?

ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ, ಅವ್ರು ಹತಾಶೆಯಿಂದ ಏನೇನೋ ಹೇಳ್ತಾರೆ, ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.