ಕನಕಪುರ: ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಯಾಗುವುದು ಬೇಕಿಲ್ಲ, ಅದಕ್ಕಾಗಿ ತಮಿಳುನಾಡಿನ ಜೊತೆ ಸೇರಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕನಕಪುರ ತಾಲ್ಲೂಕಿನ ಸಂಗಮದಿಂದ ಆರಂಭವಾದ ಕಾಂಗ್ರೆಸ್ ಪಾದಯಾತ್ರೆ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 2017ರಲ್ಲಿ ಮೊದಲ ಬಾರಿಗೆ ಐದು ಸಾವಿರ ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರ ಜಲಶಕ್ತಿ ಅಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಹೇಳಿದರು.
ಕೇಂದ್ರ ಸರ್ಕಾರ ಕೆಲ ಸ್ಪಷ್ಟನೆಗಳನ್ನು ಕೇಳಿತ್ತು. 2019ರ ಜನವರಿಯಲ್ಲಿ ಎಲ್ಲ ಆಕ್ಷೇಪಣೆಗಳಿಗೆ ಉತ್ತರ ಕೊಟ್ಟು ಸುಮಾರು ಒಂಬತ್ತು ಸಾವಿರ ಕೋಟಿ ರೂ.ವೆಚ್ಚದ ಪರಿಷ್ಕೃತ ವರದಿಯನ್ನು ಸಲ್ಲಿಸಲಾಗಿದೆ ಎಂದರು.
ನಮ್ಮ ಅವಧಿಯಲ್ಲಿ ಎಲ್ಲಿಯೂ ವಿಳಂಭವಾಗಿಲ್ಲ. ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜನರಿಗೆ ತಪ್ಪು ಮಾಹಿತಿ ನೀಡಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದು ಕಿಡಿಕಾರಿದರು.
ಕಾವೇರಿ ನೀರಿನ ವಿವಾದ ನ್ಯಾಯಾಧೀಕರಣ ಮತ್ತು ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ತಮಿಳುನಾಡಿನ ತಗಾದೆ ಹೊರತಾಗಿಯು ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ಹೇಳಿದರು.
ಮೇಕೆದಾಟು ನಮ್ಮ ಕೂಸು. ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಅರಣ್ಯ ಇಲಾಖೆ ಅನುಮತಿ ಪಡೆದು ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಲು ಎರಡು ವರ್ಷದಿಂದಲೂ ಸಾಧ್ಯವಾಗಿಲ್ಲ. 25 ಮಂದಿ ಸಂಸದರನ್ನು ಇಟ್ಟುಕೊಂಡು ಒಂದು ಯೋಜನೆ ಆರಂಭಿಸಲಾಗದಿದ್ದಕ್ಕೆ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾವೇರಿ ನದಿ ಪಾತ್ರದಲ್ಲಿ ನಾಲ್ಕುಅಣೆಕಟ್ಟೆಗಳಿಂದ 114 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಇರುವುದಿಲ್ಲ. ಆಗ ತಮಿಳುನಾಡಿಗೆ ನೀರು ಬಿಡಲು ಕಷ್ಟವಾಗುತ್ತದೆ. ನಮ್ಮ ಜನರಿಗೆ ನೀರು ಇರಲ್ಲ ಎಂದು ತಿಳಿಸಿದರು.
ತಮಿಳುನಾಡಿಗೆ ಮೇಕೆದಾಟು ಅಣೆಕಟ್ಟೆಯಿಂದ ಅನುಕೂಲವಾಗಲಿದೆ. ಯೋಜನೆಯಿಂದ ನಾಶವಾಗುವ ಆರು ಸಾವಿರ ಎಕರೆ ಅರಣ್ಯ ಭೂಮಿಗೆ ಬದಲಾಗಿ ಹತ್ತು ಸಾವಿರ ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.
ಯೋಜನೆಗೆ ವಿರೋಧ ವ್ಯಕ್ತ ಪಡಿಸಲು ತಮಿಳುನಾಡಿಗೆ ಯಾವುದೇ ಕಾರಣ ಇಲ್ಲ.ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಧರಣಿಕೂರುತ್ತಾರೆ. ಬಿಜೆಪಿ ರಾಷ್ಡ್ರೀಯ ಅಧ್ಯಕ್ಷ ಸಿ.ಟಿ.ರವಿ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ವ್ಯಂಗ್ಯ ವಾಡಿದರು.
ರಾಜ್ಯದ ಬಿಜೆಪಿ ಸರ್ಕಾರ ತಮಿಳುನಾಡಿನ ಜೊತೆ ಕೈಜೊಡಿಸಿದೆ. ಇವರಿಗೆ ಯೋಜನೆ ಜಾರಿಯಾಗುವುದು ಬೇಕಿಲ್ಲ. ಅದಕ್ಕಾಗಿ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪಾದಯಾತ್ರೆ ತಡೆಯಲು ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಹೋರಾಟ ನಿಲ್ಲಲ್ಲ. ಪ್ರತಿದಿನ ಒಂದೊಂದು ಜಿಲ್ಲೆಯ ಜನ ಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಸಿದ್ದು ಹೇಳಿದರು

