ಕಾಂಗ್ರೆಸ್ ನಿಂದ ಕಾನೂನು ಉಲ್ಲಂಘನೆ: ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆಅಧಿಕಾರ -ಆರಗ

ಬೆಂಗಳೂರು:ಪಾದಯಾತ್ರೆ ಸಂದರ್ಭದಲ್ಲಿ  ಮಾರ್ಗಸೂಚಿಗಳನ್ನು ಪಾಲನೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕರು ಈಗ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚಾಗುತ್ತಿರುವ ಕಾರಣ ನಾವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೆವು. ಪ್ರಾರಂಭದಲ್ಲಿ ಪಾಲನೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕ ರು ಈಗ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ರಾಜ್ಯಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಜನಸಾಮಾನ್ಯರಿಗೊಂದು, ಕಾಂಗ್ರೆಸ್‍ಗೆ ಒಂದು ಕಾನೂನು ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಆದರೆ ಕಾಂಗ್ರೆಸ್ ಕಾನೂನು ಮೀರಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‍ನವರನ್ನು ಜನ ಗಮನಿಸುತ್ತಿದ್ದಾರೆ. ಐದು ವರ್ಷ ಆಡಳಿತ ನಡೆಸಿದಾಗ ಕಾಂಗ್ರೆಸ್‍ಗೆ ಮೇಕೆದಾಟು ನೆನಪಾಗಲಿಲ್ಲ.ಈಗ ಅವರಿಗೆ ನೆನಪಾಗಿದೆ ಕಾಂಗ್ರೆಸ್ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಯಾವ ಕ್ರಮ ಎಂದು ಬಳಿಕ ಗೊತ್ತಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.