ಕಾನೂನು ಉಲ್ಲಂಘಿಸಿದವರು ಎಷ್ಟೇ ದೊಡ್ಡವರಾದರೂ ಕ್ರಮ-ಸಿಎಂ

ಬೆಂಗಳೂರು:ಕಾನೂನು ಉಲ್ಲಂಘಿಸುವವರು ಯಾರೇ ಆಗಿರಲಿ ಎಷ್ಟೇ ದೊಡ್ಡವರಿರಲಿ  ಕಾನೂನಿನ ಪ್ರಕಾರ  ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ದೊಡ್ಡವರಿಗೊಂದು, ಜನಸಾಮಾನ್ಯರಿಗೊಂದು ನಿಯಮ ಇಲ್ಲ.  ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಯಾವ ಸೆಕ್ಷನ್‍ನಡಿ ದೂರು ದಾಖಲಿಸುತ್ತಾರೋ ಅದರಂತೆ ಮುಂದಿನ ಕಾನೂನು ಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರನ್ನು ಬಂಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಯಾರನ್ನು ಬಂಧಿಸಬೇಕಾದರೂ ಮೊದಲು ದೂರು ದಾಖಲಾಗಬೇಕು,ನಂತರ ಎಫ್‍ಐಆರ್ ದಾಖಲಾಗುತ್ತದೆ.

ಪೊಲೀಸರು ಯಾವ ಸೆಕ್ಷನ್‍ನಡಿ ದೂರು ದಾಖಲಿಸಿಕೊಂಡಿದ್ದಾರೋ ನಂತರದ ಬೆಳವಣಿಗೆಗಳು ನಡೆಯುತ್ತವೆ ಎಂದು ಹೇಳಿದರು.

ನಾವು ಪಾದಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಇದು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಬಾರದು ಎಂಬ ಕಾರಣಕ್ಕಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಭಾನುವಾರ ಕರ್ನಾಟಕದಲ್ಲಿ 12 ಸಾವಿರ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ರಾಜಧಾನಿ ಬೆಂಗಳೂರಿನಲ್ಲೇ 8 ಸಾವಿರಕ್ಕೂಹೆಚ್ಚು ಪ್ರಕರಣಗಳು ದಾಖಲಾಗಿವೆ. ನಮಗೆ ಜನರ ಆರೋಗ್ಯ, ಜೀವನವೂ ಮುಖ್ಯ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೋವಿಡ್ ಟೆಸ್ಟ್ ನಡೆಸಲು ಹೋಗಿದ್ದರು. ನಮಗೂ ಕೂಡ ಅವರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಅವರು ನಡೆದುಕೊಂಡ ರೀತಿ ಸರಿಯಲ್ಲ ಎಂದು  ಸಿಎಂ ಅಸಮಾಧಾನ ತೋರಿಸಿದರು.

ಸಂಕ್ರಾಂತಿ ನಂತರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳಿಗೆ ರಿಯಾಯ್ತಿ ನೀಡುವ ಚಿಂತನೆ ಪ್ರಾರಂಭದಲ್ಲಿತ್ತು. ಆದರೆ ಬೆಂಗಳೂರಿನಲ್ಲಿ ಕೋವಿಡ್ ಪಾಸಿವಿಟಿ ದರ 6.8ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಬೇರೆ ಜಿಲ್ಲೆಗೂ ಹರಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.