ಮೈಸೂರು: ನಗರದಲ್ಲಿನ ವೀರನಗೆರೆಯಲ್ಲಿ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಥಳದ ಪ್ರಾತ್ಯಕ್ಷಿಕೆ ನೀಡಲಾಯಿತು.
ವಿದ್ಯಾರ್ಥಿಗಳಿಗೆ ವೀರನ ಗೆರೆಯ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚರಣೆ ಮತ್ತು ನಂಬಿಕೆಗಳು, ಉಳಿದು ಬಂದಿರುವ ಸ್ಮಾರಕ ಮತ್ತು ವೀರಗಲ್ಲು ಹಾಗೂ ಮಹಾಸತಿ ಕಲ್ಲುಗಳ ಬಗ್ಗೆ ಮಾಹಿತಿಯನ್ನು ಕರಾಮುವಿವಿಯ ಪ್ರಾಚ್ಯವಸ್ತು ಇಲಾಖೆ ಮುಖ್ಯಸ್ಥ ಡಾ. ಶಲ್ವಪ್ಪಿಲ್ಳೈ ಅಯ್ಯಂಗಾರ್ ನೀಡಿದರು.

ವೀರನಗೆರೆಯಲ್ಲಿ ಸ್ಮಾರಕಗಳನ್ನು ವೀಕ್ಷಿಸಿ, ಆ ಪ್ರಾಚೀನ ಐತಿಹಾಸಿಕ ಶಿಲಾ ಸ್ಮಾರಕಗಳ ದುಸ್ಥಿತಿಯನ್ನು ವಿದ್ಯಾರ್ಥಿಗಳಿಗೆ ಶಲ್ವಪ್ಪಿಲ್ಳೈ ಅಯ್ಯಂಗಾರ್ ತೋರಿಸಿ ಅದನ್ನು ಸಂರಕ್ಷಿಸುವ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿದರು.
ವಿದ್ಯಾರ್ಥಿಗಳು ಆ ಐತಿಹಾಸಿಕ ಜಾಗದಲ್ಲಿ ನಿಂತು ನೂರಾರು ವರ್ಷದ ಪ್ರಾಚೀನ ದಾಖಲೆಗಳನ್ನು, ಪುರಾತತ್ವದ ಆಧಾರಗಳನ್ನು ನೋಡಿ, ಮುಟ್ಟಿ, ತಾವು ಇತಿಹಾಸದ ಭಾಗವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಅವರೇ ಅಲ್ಲಿರುವ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳನ್ನು ಅವುಗಳಿಗಿರುವ ವ್ಯತ್ಯಾಸ ಕಂಡುಕೊಂಡು ಖುಷಿಯಿಂದ ಅವುಗಳನ್ನು ಎಣಿಸಿ ಆ ವೀರರ, ಮಹಾಸತಿಯರ ಆತ್ಮಗಳಿಗೆ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಪೆÇ್ರ. ಅಶೋಕ್ ಕಾಂಬ್ಳೆ, ಡಾ. ಪ್ರಭು, ಡಾ. ಸಂತೋಷ್ ನಾಯಕ್, ಡಾ. ಮಂಜುಳಾ, ಡಾ. ಮಂಜುನಾಥ್, ಡಾ. ಅಂಜನಾಮೂರ್ತಿ, ಡಾ. ರವಿಪ್ರಸಾದ್ ಜನಾರ್ದನ್, ನಂದೀಶ್, ಮುನಿಸ್ವಾಮಿ, ಸಾರಂಗಪಾಣಿ, ಸತೀಶ್, ಸುಧಾಕರ್, ಯಲ್ಲಮ್ಮ, ಶಿವಶಂಕರ್, ಯಜಮಾನ್ ಶ್ರೀನಿವಾಸ್, ಪ್ರೇಮ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಮುಕ್ತ ವಿವಿ, ಮೈಸೂರು ವಿವಿ,ಮಹಾರಾಣಿ ಕಾಲೇಜು, ಮಹಾಜನ ಪ್ರಥಮದರ್ಜೆ ಕಾಲೇಜು, ಕರ್ನಾಟಕ ರಾಜ್ಯದ ಪುರಾತತ್ವ ಇಲಾಖೆ, ಮತ್ತು ಅರಿವು ಶಾಲೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

