ಮೈಸೂರು; ಮೈಸೂರಿನ ಆರ್.ಸಿ ಬಡಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿದರು.
ಬಡಾವಣೆಯಲ್ಲಿನ ಯುಜಿಡಿ, ವಿದ್ಯುತ್ ದೀಪ, ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಶೀಲನೆ ನಡೆಸಿದರು.
ವಿಜಯನಗರ ನಾಲ್ಕನೇ ಹಂತಕ್ಕೆ ಹೊಂದಿಕೊಂಡಂತೆ ಇರುವ ಆರ್.ಸಿ. ಬಡಾವಣೆಗೆ ಜಿ.ಟಿ.ದೇವೇಗೌಡ ಭೇಟಿ ನೀಡಿದಾಗ ನಿವಾಸಿಗಳು ಸಮಸ್ಯೆಗಳನ್ನು ತೋಡಿಕೊಂಡರು.
ಈ ವೇಳೆ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಮೂಡಾ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಆಗುತ್ತದೆ ಹಾಗಾಗಿ ಯುಜಿಡಿ ಸಮಸ್ಯೆ ಸರಿಪಡಿಸುವಂತೆ ನಿವಾಸಿಗಳು ಮನವಿ ಮಾಡಿದರು.
ಕುಡಿಯುವ ನೀರು, ಬೀದಿ ದೀಪ, ಯುಜಿಡಿ, ರಸ್ತೆ ಹಾಗೂ ರಾಜಕಾಲುವೆ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಒಟ್ಟು 7-8 ಬಡಾವಣೆಗಳಿದ್ದು ಹಲವಾರು ವರ್ಷದಿಂದಲೂ ಇದೇ ಸಮಸ್ಯೆ ಇದೆ ಎಂದು ಸಮಸ್ಯೆಗಳ ಸರಮಾಲೆಯನ್ನೇ ಶಾಸಕರ ಮುಂದಿಟ್ಟರು.
ಜಿ.ಟಿ.ದೇವೇಗೌಡ ಅವರು ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

