ಅವ್ರು ಕಾನೂನು ರೀತಿ ಕ್ರಮಕ್ಕೆ ಹೊರಟರೆ ಅದೇ ರೀತೀಲಿ ಉತ್ತರ ಕೊಡ್ತೀವಿ -ಸರ್ಕಾರಕ್ಕೆ ಸಿದ್ದು ಟಾಂಗ್

ರಾಮನಗರ: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ನಮ್ಮ ಮೇಲೆ ಸರ್ಕಾರ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಹೊರಟರೆ, ನಾವೂ ಕೂಡಾ ಕಾನೂನಿನ ರೀತಿಯಲ್ಲೇ ಉತ್ತರ ಕೊಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿದ್ದು ಮಾತನಾಡಿದರು.

ಅದೇನೇನು ಕೇಸ್ ದಾಖಲಿಸುತ್ತಾರೋ ದಾಖಲಿಸಲಿ,ಅದಕ್ಕೆ ತಕ್ಕ ಹಾಗೆ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಜನ ಸ್ವಯಂ ಪ್ರೇರಿತರಾಗಿ  ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ, ಇದು ಮೇಕೆದಾಟು ಯೋಜನೆಯ ಬಗ್ಗೆ ಜನರ ಆಸಕ್ತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಮೇಕೆದಾಟು ನಮ್ಮ ಕಾಂಗ್ರೆಸ್ ಸರ್ಕಾರದ ಯೋಜನೆ.ಇದಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸಿ ಡಿ.ಪಿ.ಆರ್ ಸಿದ್ಧಪಡಿಸಿದ್ದು ನಮ್ಮ ಸರ್ಕಾರ. ಆದರೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ನಿತ್ಯ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು, ನಮಗೆ ಯೋಜನೆ ಜಾರಿ ಮಾಡಲು ಅನುಮತಿ ಸಿಗಲಿಲ್ಲ ಅಂತ ಬಿಡಬಹುದು.

ಆದರೆ ಈಗ ಎರಡೂ ಕಡೆ ಬಿಜೆಪಿ ಸರ್ಕಾರಗಳೇ ಇವೆ. ರಾಜ್ಯದಿಂದ 25 ಜನ ಬಿಜೆಪಿಯ ಸಂಸದರನ್ನು ಆರಿಸಿ ಕಳುಹಿಸಿದ್ದಾರೆ. ಇನ್ನೂ ಯಾಕೆ ಯೋಜನೆ ಜಾರಿ ಮಾಡಿಲ್ಲ ಮಿಸ್ಟರ್ ಕಾರಜೋಳ ಎಂದು ಕಾರವಾಗಿ ಪ್ರಶ್ನಿಸಿದರು.

ಕೊರೊನಾ ಇದೆ, ನಿಯಮ ಪಾಲನೆ ಮಾಡಿಲ್ಲ ಎಂದು ನಾನು ಸೇರಿದಂತೆ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಹೀಗೆ ಕೇಸ್ ಹಾಕಿ ನಮ್ಮನ್ನು ಹೆದರಿಸಬಹುದು ಎಂದುಕೊಂಡರೆ ಬಿಜೆಪಿಯವರಂತ ಮೂರ್ಖರು ಯಾರೂ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಾವಿರಾರು ಜನ ಸೇರಿಸಿ ಪ್ರತಿಭಟನೆ ಮಾಡಿದ ಸುಭಾಷ್ ಗುತ್ತೇದಾರ್ ಅವರ ಮೇಲೆ ಕೇಸ್ ಹಾಕಿದ್ದೀರ ಬೊಮ್ಮಾಯಿ ಅವರೇ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಭಗವಂತ್ ಖೂಬಾ ಇವರೆಲ್ಲರ ಮೇಲೂ ಕೇಸ್ ಹಾಕಿದ್ದಾರಾ ಎಂದು ಸಿದ್ದು ಗುಡುಗಿದರು.

ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು,ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದರು.ಆವಾಗೆಲ್ಲ ಕೊರೊನಾ ಮೂರನೇ ಅಲೆ ಇರಲಿಲ್ಲ, ನಮ್ಮ ಪಾದಯಾತ್ರೆ ಇಂದ ಮಾತ್ರ ಕೊರೊನಾ ಹರಡುತ್ತಾ‌ ಎಂದು ಹರಿಹಾಯ್ದರು.

ನಾವು ಪಾದಯಾತ್ರೆ ಮಾಡಬಾರದು, ಜನ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಜಾಗೃತರಾಗಬಾರದು ಎಂಬುದಷ್ಟೇ ಈ ಸರ್ಕಾರ ದುರುದ್ದೇಶ ಎಂದು ಸಿದ್ದು ಕಿಡಿ ಕಾರಿದರು.

ಬಿಜೆಪಿಯವರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಬಲವರ್ಧನೆಗಾಗಿ ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಅಂತಾನೆ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ, ಈ ಪಾದಯಾತ್ರೆ ವಿಷಯದಲ್ಲಿ ಯಾವ ಪ್ರತಿಷ್ಠೆಯಾಗಲೀ, ಒಣ ಜಂಭವಾಗಲೀ ಇಲ್ಲ. ರಾಜ್ಯದ ಹಿತಾಸಕ್ತಿ ಅಷ್ಟೇ ಇದೆ ಎಂದು ಸಿದ್ದು ಸ್ಪಷ್ಟಪಡಿಸಿದರು.

ಕೊರೊನಾ ಹರಡುತ್ತಿರೋದು ಬಿಜೆಪಿ ಅವರಿಂದಲೇ. ನಿನ್ನೆ ಮೊನ್ನೆವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಚುನಾ ವಣಾ ರ್ಯಾಲಿ ನಡೆಸಿದ್ದಾರೆ, ಅಲ್ಲೆಲ್ಲಾ ಕೊರೊನಾ ಇಲ್ವ? ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಕೊರೊನಾ ಬರಲ್ವಂತ? ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ರೋಗ ಉಲ್ಬಣವಾದರೆ ಲಾಕ್ ಡೌನ್ ಮಾಡಬೇಕಾಗುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ, ಕಳೆದ ಎರಡು ವರ್ಷದಲ್ಲಿ ಆದ ಅನುಭವ ಸಾಲದೆ ಎಂದು ಹೇಳಿದರು.

ಸೋಮವಾರ ಡಿ.ಕೆ ಶಿವಕುಮಾರ್ ಅವರ ಗಂಟಲು ದ್ರವ ಮಾದರಿ ತಗೊಂಡು ಬರಲು ಸರ್ಕಾರ ವೈದ್ಯಾಧಿಕಾರಿಯನ್ನು ಕಳುಹಿಸಿತ್ತು.

ಬಹುಶಃ ಮಾದರಿ ಪರೀಕ್ಷೆ ಮಾಡಿ ಕೊರೊನಾ ಇದೆ ಎಂದು ಸುಳ್ಳು ವರದಿ ಕೊಡುವ ಯೋಚನೆ ಮಾಡಿಕೊಂಡಿದ್ದರೋ ಏನೋ. ಎರಡು ದಿನ ಬಿಸಿಲಿನಲ್ಲಿ ನಡೆದರೂ ಡಿ.ಕೆ ಶಿವಕುಮಾರ್ ಕಲ್ಲುಗುಂಡಿನ ಹಾಗೆ ಇದ್ದಾರೆ ಎಂದು ಸಿದ್ದು ತಿಳಿಸಿದರು.

ಕೊರೊನಾ ಬರೀ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಹೆಚ್ಚಾಗ್ತಾ ಇದೆ. ಸೋಂಕು ಹೆಚ್ಚಾಗುವುದಕ್ಕೂ ನಮ್ಮ ಪಾದಯಾತ್ರೆಗೂ ಸಂಬಂಧ ಇಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.