ಬೆಂಗಳೂರು:ಕೋವಿಡ್ ನಿರ್ವಹಣೆ ಬಗ್ಗೆ ವದಂತಿ, ತಪ್ಪು ಸಂದೇಶ ಹರಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಸಚಿವ ಸುಧಾಕರ್ ಎಚ್ಚರಿಕೆ
ನೀಡಿದ್ದಾರೆ.
ಜತೆಗೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕರ್ನಾಟಕ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ – 2020ರ ಅಡಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣ,ಪರೀಕ್ಷೆ ಮೊದಲಾದ ವ್ಯವಸ್ಥೆಯಲ್ಲಿ ಯಾವುದೇ ತಪ್ಪು ಕಂಡುಬಂದರೆ ಪುರಾವೆ ಸಹಿತ ಸರ್ಕಾರಕ್ಕೆ ದೂರು ನೀಡಬೇಕಿತ್ತು. ಅದು ಬಿಟ್ಟು ರಾಜಕೀಯ ಲಾಭಕ್ಕಾಗಿ ಬೇಜವಾಬ್ದಾರಿಯಿಂದ ಸುಳ್ಳು ವದಂತಿ ಹರಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಸರ್ಕಾರ ಹಣ ಸಂಪಾದಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದರು.
ಅಲ್ಲದೆ, ಸರ್ಕಾರವೇ ತಮಗೆ ಕೋವಿಡ್ ಪಾಸಿಟಿವ್ ಎಂದು ಬಿಂಬಿಸಲು ಯತ್ನಿಸಿದೆ ಎಂದೂ ದೂರಿದ್ದರು.
ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಹಿಡಿದು ಪಾಸಿಟಿವ್ ಎಂದು ತೋರಿಸಲಾಗುತ್ತಿದೆ ಎಂದೂ ಹೇಳಿಕೆ ನೀಡಿದ್ದಾರೆ.
ಈ ರೀತಿ ಆಧಾರರಹಿತ ಆರೋಪ, ವದಂತಿಗಳನ್ನು ಹರಡಿದ್ದು, ಡಿಕೆಶಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್, ಗೃಹ ಸಚಿವರು ಹಾಗೂ ನನ್ನನ್ನು ವೈಯಕ್ತಿಕವಾಗಿ ನಿಂದಿಸಿರುವುದನ್ನು ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ.
ಆದರೆ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ವೈದ್ಯಕೀಯ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ತಪ್ಪು ಮಾಹಿತಿ, ವದಂತಿ ಹರಡಿರುವುದು, ದೇಶದ ಗೌರವಕ್ಕೆ ಧಕ್ಕೆ ತರುವಂತೆ ನೀಡಿದ ಹೇಳಿಕೆಗಳಿಗೆ ಪುರಾವೆ ಒದಗಿಸಬೇಕು.ಇಲ್ಲಾ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ಹರಡಿರುವುದರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಸುಧಾಕರ್ ಎಚ್ಚರಿಸಿದ್ದಾರೆ.

