ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ಯೋಧ

ತೆಲಂಗಾಣ: ಕೇಂದ್ರ ಮೀಸಲು ಪಡೆಯ(ಸಿಆರ್‍ಪಿಎಫ್) ಯೋಧರೊಬ್ಬರು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ನಂತರ ತಾನೂ ಕೂಡ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಾಂಗಣದಲ್ಲಿ ನಡೆದಿದೆ.

ಹಮಿಜಾಕ್ಷಿ(8), ಜಾನಿ(4) ಎಂಬ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಯೋಧ ರಾಜ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್‍ಕುಮಾರ್ ಅವರನ್ನು ಮುಂಬೈಗೆ ನಿಯೋಜಿಸಲಾಗಿತ್ತು. ಸಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಹುಟ್ಟೂರಾದ ಮಹಾಬೂಬಾಬಾದ್‍ ನ ಮಂಡಲ್‍ಗೆ ಬಂದಿದ್ದರು.

ಅವರು ಹತ್ತು ವರ್ಷಗಳ ಹಿಂದೆ ಸಿರಿಶಾ ಅವರೊಂದಿಗೆ ವಿವಾಹವಾಗಿದ್ದರು. ಇಬ್ಬರು ಮಕ್ಕಳಿದ್ದರು.

ಇತ್ತೀಚೆಗೆ ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ನಡೆದಿದ್ದವು.

ಸೋಮವಾರ ರಾತ್ರಿ ಪತ್ನಿ ಸಿರಿಶಾ ಅವರೊಂದಿಗೆ ಜಗಳವಾಗಿದೆ, ಇದರಿಂದ ಕುಪಿತಗೊಂಡಿದ್ದ ರಾಜ್‍ಕುಮಾರ್ ಬೆಳಗ್ಗೆ ಇಬ್ಬರೂ  ಮಕ್ಕಳನ್ನು ಬೈಕ್‍ನಲ್ಲಿ ಕರೆದುಕೊಂಡು ಹೋಗಿ ಬಾವಿಗೆ ತಳ್ಳಿದ್ದಾರೆ. 

ನಂತರ ರಾಜಕುಮಾರ್ ರೈಲ್ವೆ ನಿಲ್ದಾಣಕ್ಕೆ ಬಂದು ಚಲಿಸುತ್ತಿದ್ದ ರೈಲಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಸ್ಥಳೀಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.