ರಾಜಕೀಯ ಉದ್ದೇಶದ ಪಾದಯಾತ್ರೆ ಕೈಬಿಡಿ- ಆರಗ ಜ್ಞಾನೇಂದ್ರ

ಬೆಂಗಳೂರು:ನಿಮ್ಮ ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ. ದಯವಿಟ್ಟು ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮವನ್ನು ಕೈಬಿಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ನಾಯಕರನ್ನು ಕೋರಿದ್ದಾರೆ.

ಬುಧವಾರ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ನವರು ಪಾದಯಾತ್ರೆ ಆರಂಭಿಸಿದಾಗ, ನಮಗೆ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಬಗ್ಗೆ ಆತಂಕ ಇತ್ತು.ಅದಕ್ಕಾಗಿ ಆ ಯಾತ್ರೆಯನ್ನು ಮುಂದೆ ಹಾಕಿಕೊಳ್ಳುವಂತೆ  ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆವು ಅವರು ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಮನವಿಗೆ ಅವರು ಬೆಲೆ ಕೊಡಲಿಲ್ಲ,ಈಗ ನಮ್ಮ ಆತಂಕ ನಿಜವಾಗುತ್ತಿದೆ ಎಂದು ವಿಷಾದಿಸಿದರು.

ಕೊರೊನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡುತ್ತಿರುವುದಲ್ಲದೆ ವಿತಂಡವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಾದಯಾತ್ರೆಯಲ್ಲಿ ತೊಡಗಿಕೊಂಡಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ,ಪಾದಯಾತ್ರೆ ಕೈಬಿಡಿ ಎಂದು

ಹೇಳಿದರು.

ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಪಾದಯಾತ್ರೆಯನ್ನು ಕೈಬಿಡಿ. ಕೊರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ, ಎಲ್ಲ ವರ್ಗದವರೂ ಆತಂಕಗೊಂಡಿದ್ದಾರೆ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದೀರಿ ಅವರ ಕ್ಷಮೆ ಕೇಳಬೇಕಾಗಿದೆ ಎಂದು ಸಚಿವರು ಹೇಳಿದರು.

ಲಾಕ್‍ಡೌನ್ ಕೊನೆಯ ಅಸ್ತ್ರ: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್‍ಡೌನ್ ಕೊನೆಯ ಅಸ್ತ್ರವಾಗಲಿದೆ ಎಂದು ಇದೇ ವೇಳೆ ಗೃಹ ಸಚಿವರು  ಹೇಳಿದರು.

ಆದರೆ ಲಾಕ್‍ಡೌನ್ ಮಾಡುವ ಬಗ್ಗೆ ಸರ್ಕಾರ ಚರ್ಚೆ ನಡೆಸಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವುದನ್ನು ತಡೆಗಟ್ಟಲು ಕೆಲವು ನಿಬಂಧನೆಗಳನ್ನು ಹಾಕಬಹುದು. ಆದರೆ ಇದಕ್ಕೆ ಲಾಕ್‍ಡೌನ್ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದರು.