ಮೈಸೂರು:ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹವನ್ನು ನೋಡಲು ಬಂದ ತಂಗಿಯೂ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲಕುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಕೊಡಗಿನ ಪೊನ್ನಂಪೇಟೆ ನಿವಾಸಿ ಮಂಜುನಾಥ್ ಮತ್ತು ರತ್ನ ದಂಪತಿಯ ಪುತ್ರಿ ರಶ್ಮಿ(21) ಮೃತ ಪಟ್ಟ ಯುವತಿ.
ಈಕೆ ವಿಜಯನಗರದ ನಾಲ್ಕನೇ ಹಂತದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ.
ಸೋಮವಾರ ರಾತ್ರಿ ಕಾರು ದ್ವಿಚಕ್ರವಾಹನ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ರಶ್ಮಿಯ ದೊಡ್ಡಪ್ಪನ ಮಗ ಕೀರ್ತಿ ಅಯ್ಯಪ್ಪ ಮೃತಪಟ್ಟಿದ್ದ.
ಆತನ ಮೃತದೇಹವನ್ನು ನೋಡಲು ಸಾರ್ವಜನಿಕ ಆಸ್ಪತ್ರೆಗೆ ಈಕೆ ಆಗಮಿಸಿದ್ದಳು. ಅಣ್ಣನನ್ನು ಕಳೆದುಕೊಂಡ ನೋವಿನಿಂದ ಹೃದಯಾಘಾತಕ್ಕೊಳಗಾಗಿ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾಳೆ.

