ಮೈಸೂರು : ಪಂಚರಾಜ್ಯಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ ಬೇಡಿಕೆಯಂತೆ ಮೈಸೂರಿನ ಪ್ರತಿಷ್ಠಿತ ಮೈಲ್ಯಾಕ್ ಸಂಸ್ಥೆಯಿಂದ ಅಳಿಸಲಾಗದ ಶಾಯಿ ಕಳುಹಿಸಿ ಕೊಡಲಾಗುತ್ತದೆ.
ಮೈಲ್ಯಾಕ್ ನಿಂದ 5 ಲಕ್ಷ ಅಳಿಸಲಾಗದ ಶಾಯಿ ಬಾಟಲ್ ಕಳುಹಿಸಲಾಗುತ್ತಿದೆ.
ಫೆ.10ರಿಂದ ಮಾ.10ರವರೆಗೆ ಉತ್ತರಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಶಾಯಿಯನ್ನು ಬಳಸಲಾಗುತ್ತದೆ.
ಚುನಾವಣಾ ಆಯೋಗದ ಬೇಡಿಕೆಯಂತೆ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅಲ್ಲಿಗೆ ಈ ಅಳಿಸಲಾಗದ ಶಾಯಿಯನ್ನು ಕಳುಹಿಸಲಾಗುತ್ತದೆ.
2021ರ ನವೆಂಬರ್ ನಲ್ಲಿ ಉತ್ತರಪ್ರದೇಶದಿಂದ 10 ಸಿಸಿಯ 4 ಲಕ್ಷ ಬಾಟಲ್, ಪಂಜಾಬ್ ಗೆ 62 ಸಾವಿರ ಬಾಟಲ್, ಗೋವಾಗೆ 5 ಸಾವಿರ ಬಾಟಲ್, ಮಣಿಪುರಕ್ಕೆ 7,400 ಬಾಟಲ್ ಹಾಗೂ ಉತ್ತರಾ ಖಂಡ್ ಗೆ 30 ಸಾವಿರ ಬಾಟಲ್ ಸೇರಿದಂತೆ ಒಟ್ಟು 5,04,000 ಇಂಕ್ ಬಾಟಲ್ ಗೆ ಬೇಡಿಕೆ ಬಂದಿದೆ.
ಅದರಂತೆ ಈ ಐದೂ ರಾಜ್ಯಗಳಿಗೆ ಅಳಿಸಲಾಗದ ಶಾಯಿ ಕಳುಹಿಸಲಾಗುತ್ತದೆ.
ಇದರಿಂದ ಒಟ್ಟು 8.96 ಕೋಟಿ ವಹಿವಾಟನ್ನು ಮೈಲ್ಯಾಕ್ ಮಾಡಿದಂತಾಗಿದೆ.
ಮಾರ್ಕರ್ ಪೆನ್ ಗೂ ಬೇಡಿಕೆ: ಭಾರತೀಯ ಚುನಾವಣಾ ಆಯೋಗವು ಮುಂದೆ ಇಂಕ್ ಬಾಟಲ್ ಬದಲಿಗೆ ಮಾರ್ಕರ್ ಪೆನ್ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದೆ.
ಅವರ ಬೇಡಿಕೆಯಂತೆ ನಮ್ಮ ಸಂಸ್ಥೆಯು ಸುದೀರ್ಘ ಪ್ರಯೋಗ ನಡೆಸಿ ಗುಣಮಟ್ಟದ ಮಾರ್ಕರ್ ಪೆನ್ ತಯಾರಿಕೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು,ಇದು ಅಂತಿಮ ಹಂತದಲ್ಲಿದೆ. ಇದು ಯಶಸ್ವಿಯಾಗಲಿದೆ ಎಂದು ಮೈಲ್ಯಾಕ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

