ಮೈಸೂರು:ಗುಂಡಿಗಳ ಮಯವಾಗಿದ್ದ ಮೈಸೂರು ನಗರದ ರಸ್ತೆಗಳಿಗೆ ಕಡೆಗೂ ಮುಕ್ತಿ ಸಿಗುವ ಕಾಲ ಬಂದೇಬಿಟ್ಟಿದೆ.
ಸೋಮವಾರ ಬೆಳ್ಳಂಬೆಳಿಗ್ಗೆ ಮೈಸೂರು ನಗರ ಪಾಲಿಕೆ ಮೇಯರ್ ಸುನಂದ ಪಾಲನೇತ್ರ ಅವರು ಕಾರ್ಪೊರೇಷನ್ ಸಮೀಪ ರಸ್ತೆ ಗುಂಡಿ ಮಚ್ಚುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಮೇಯರ್ ಅವರು ಗುಂಡಿ ಶೀಘ್ರವೇ ಮೈಸೂರು ಗುಂಡಿ ಮುಕ್ತ ನಗರವಾಗಲಿದೆ ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 65 ವಾರ್ಡ್ ಗಳಲ್ಲಿ ಮಳೆಯಿಂದ ಹಾನಿಯಾಗಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಅಭಿವೃಧ್ದಿಪಡಿಸಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ನಗರಪಾಲಿಕೆ ಅನುದಾನದಲ್ಲಿ ಪ್ರತಿ ವಾರ್ಡ್ ಗೆ 10ಲಕ್ಷರೂ.ಗಳಂತೆ ಅನುಮೋದನೆ ನೀಡಿ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಎಂದರು.
ರಸ್ತೆಗಳು ಹಾಳಾಗದೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈಗ ಅನುಮೋದನೆಯಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಲೆಕ್ಕ ಶೀರ್ಷಿಕೆ ಅನುದಾನಗಳಲ್ಲಿನ ಎಲ್ಲಾ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಂಡು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮೇಯರ್ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಅನ್ವರ್ ಬೇಗ್, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಹಲವಾರು ಸದಸ್ಯರು ಹಾಜರಿದ್ದರು.

