ಸಿದ್ದರಾಮಯ್ಯನವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಮಹನೀಯರು ನೆನಪಾಗುತ್ತಿದ್ದಾರೆ -ಪ್ರತಾಪ್ ಸಿಂಹ

ಮೈಸೂರು: ಸಿದ್ದರಾಮಯ್ಯನವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಮಹನೀಯರು ನೆನಪಾಗುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಾಪ್ ಸಿಂಹ ಮೈಸೂರಲ್ಲಿ ಬುಧವಾರ ಮಾತನಾಡಿದರು.

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ ಕುರಿತು ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಅಧಿಕಾರದಲ್ಲಿ ಇದ್ದಾಗ ಅವರು ಮಾಡಿದ್ದೆಲ್ಲ ಯಾವ ಕೊಡುಗೆಯೂ ಇಲ್ಲದ, ಕರ್ನಾಟಕಕ್ಕೆ ತೊಂದರೆ ಮಾಡಿದವರನ್ನೇ ಆಯ್ಕೆ ಮಾಡುತ್ತಿದ್ದರು ಎಂದರು.

ಸಿದ್ದರಾಮಯ್ಯನವರೇ ನಾರಾಯಣಗುರುಗಳ ಬಗ್ಗೆ ಈಗ ಇಷ್ಟೊಂದು ಅಭಿಮಾನವಿದೆಯಲ್ಲ, 2013ರಿಂದ 18ವರೆಗೆ ನಿಮಗೆ ಯಾಕೆ ನಾರಾಯಣಗುರುಗಳ ನೆನಪಾಗಲಿಲ್ಲ. ಯಾಕೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮೈಸೂರು ಮಹಾರಾಜರು ಯಾಕೆ ನೆನಪಾಗಿಲ್ಲ, ನಿಮಗೆ ನೆನಪಾಗಿರುವುದು ಟಿಪ್ಪು ಸುಲ್ತಾನ್, ಇಂದಿರಾಗಾಂಧಿ, ನೀವು ಇಂದು ಹೇಳುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಇಂತಹ ಮಾತಿನಿಂದ ಜನ ಮಾರುಹೋಗಲ್ಲ ಎಂದರು.

ಸಿದ್ದರಾಮಯ್ಯನವರು ಸಿಎಂ ಆಗಿದ್ದ ಸಂದರ್ಭದಲ್ಲಿ ಕ್ಯಾಂಟೀನ್ ಮಾಡಲು ಹೋದಾಗ ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸರು, ಒನಕೆ ಒಬ್ಬವ್ವ, ಸಂಗೊಳ್ಳಿ ರಾಯಣ್ಣ ಯಾರೂ ನೆನಪಾಗಿಲ್ಲ, ಅವರಿಗೆ ನೆನಪಾಗಿದ್ದು ಇಂದಿರಾಗಾಂಧಿ ಎಂದು ವ್ಯಂಗ್ಯವಾಡಿದರು.

ಇನ್ನು 2014ರಲ್ಲಿ ಇವರೇ ಸಿಎಂ ಆಗಿದ್ದರು. ಗಣರಾಜ್ಯೋತ್ಸವಕ್ಕೆ ಟ್ಯಾಬ್ಲೋ ಕಳಿಸಬೇಕು ಎಂದು ಹೇಳಿದಾಗ ಆಗ ಅವರಿಗೆ ಅನ್ನ, ನೀರು, ವಿದ್ಯೆ, ನೆರಳು ನೀಡಿದಂತಹ ಮೈಸೂರು ವಿವಿ ಕಟ್ಟಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಾಗಲಿಲ್ಲ. ಕರ್ನಾಟಕದ ಯಾವ ಮಹನೀಯರೂ ನೆನಪಾಗಲಿಲ್ಲ. ಯದುವಂಶವನ್ನು ನಿರ್ವಂಶ ಮಾಡಲು ಹೊರಟ ಟಿಪ್ಪು ಸುಲ್ತಾನನ ನೆನಪಾಗಿ ಟಿಪ್ಪು ಸುಲ್ತಾನನ ಟ್ಯಾಬ್ಲೋ ಕಳಿಸಿದರು ಎಂದು ಪ್ರತಾಪ್ ಸಿಂಹ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ಪದೇ ಪದೇ ಸಮಾಜದಲ್ಲಿ ಒಡಕನ್ನು ಮೂಡಿಸುವ ಹೇಳಿಕೆಗಳನ್ನು ನಿಲ್ಲಿಸುವಂತೆ ಸಲಹೆ ನೀಡಿದ ಸಂಸದರು, ಸಿದ್ದರಾಮಯ್ಯನವರು ಕೊಡುತ್ತಿರುವ ಹೇಳಿಕೆ ಅವರು ಎತ್ತುತ್ತಿರುವ ವಿಚಾರ ನೋಡಿದರೆ ಅವರಿಗೆ ಒಂದು ರೀತಿ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಅಂತ ನನಗನಿಸುತ್ತಿದೆ ಎಂದು ಹೇಳಿದರು.

ಟ್ಯಾಬ್ಲೋ ವಿಚಾರಕ್ಕೆ ಬರೋದಾದರೆ ಈ ಬಾರಿ ಥೀಮ್ ಭಾರತ ಸ್ವಾತಂತ್ರ್ಯ ಮಹೋತ್ಸದ 75 ವರ್ಷಗಳ ಸಂಭ್ರಮ. 21 ಟ್ಯಾಬ್ಲೋಗಳಿಗೆ ಅವಕಾಶವಿದೆ. 21ರಲ್ಲಿ 9ನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಕೊಡುತ್ತವೆ. 12 ಟ್ಯಾಬ್ಲೋಗಳನ್ನು 29 ರಾಜ್ಯಗಳು ಹಾಗೂ 7 ವಿವಿಧ ಕೇಂದ್ರಾಡಳಿತ ಪ್ರದೇಶಗಳು ಒಟ್ಟು 36ಕ್ಕೂ ಕೂಡ ಅವಕಾಶವನ್ನು ಕೊಡುತ್ತಾರೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವಕಾಶ ಸಿಕ್ಕುವುದು 12 ರಾಜ್ಯದವರಿಗೆ ಮಾತ್ರ ಎಂದು ತಿಳಿಸಿದರು.

ರಾಜ್ಯವನ್ನು ಆಳಿದಂತಹವರು. 13 ಬಜೆಟ್ ನೀಡಿದವರು. ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎನ್ನುವದರ ಅರಿವಿಲ್ಲದೆಯೆ ಸಮಾಜದಲ್ಲಿ ಒಡಕು ಮೂಡಿಸುವ, ಯಾವುದೋ ಸಮುದಾಯವನ್ನು ಎತ್ತಿಕಟ್ಟುವ, ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಹೇಳಿ ಹುಯಿಲೆಬ್ಬಿಸುತ್ತಿರುವುದು ಸರಿಯಲ್ಲ. ಅದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡು ಟ್ವೀಟ್ ಮಾಡಬೇಕು ಎಂದು ಪ್ರತಾಪ್ ಸಿಂಹ ಮಾರ್ಮಿಕವಾಗಿ ನುಡಿದರು.