ಆಂಬುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ನೋವನುಭವಿಸಿದ ಗರ್ಭಿಣಿ

ಮೈಸೂರು: ರಸ್ತೆಯಲ್ಲಿ ಭತ್ತ,ರಾಗಿ, ಹುರುಳಿ ಹೀಗೆ ಧಾನ್ಯ ಒಕ್ಕಣೆ ಮಾಡುವುದರಿಂದ ವಾಹನ ಸವಾರರಿಗೆ ಹಿಡಿತ ತಪ್ಪಿ ಅವಘಡಗಳು ಸಂಭವಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಮತ್ತೊಂದು ಘಟನೆ ವರದಿಯಾಗಿದೆ.

ಹುರುಳಿ ಒಕ್ಕಣೆ ಮಾಡಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಿದ್ದ ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ ನಲ್ಲೇ ಅರ್ಧಗಂಟೆಗೂ ಹೆಚ್ಚು ಕಾಲ ನೋವನುಭವಿಸಿದ ಘಟನೆ  ನಂಜನಗೂಡು ತಾಲೂಕಿನ ಕೂಡ್ಲಾಪುರದಲ್ಲಿ ನಡೆದಿದೆ.

ಆಂಬುಲೆನ್ಸ್ ನ ಚಕ್ರಕ್ಕೆ ಹುರಳಿ ಸೊಪ್ಪು ಸಿಕ್ಕಿ ಹಾಕಿಕೊಂಡಿದ್ದರಿಂದ ಆಂಬುಲೆನ್ಸ್  ರಸ್ತೆಯಲ್ಲಿಯೇ ನಿಲ್ಲಬೇಕಾಯಿತು.

ಈ ಹಂತದಲ್ಲಿ ಸ್ಥಳೀಯ ರೈತರ ನೆರವಿನಿಂದ ಹುರಳಿ ಸೊಪ್ಪು ತೆಗೆದುಹಾಕಿ ಆಂಬುಲೆನ್ಸ್ ಚಲಿಸಲು ಅರ್ಧಗಂಟೆಗೂ ಹೆಚ್ಚು ಕಾಲ ಬೇಕಾಯಿತು.

ಇದರಿಂದಾಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಗರ್ಭಿಣಿ ಆಂಬುಲೆನ್ಸ್ ನಲ್ಲೆ ನೋವಿನಿಂದ ಚಡಪಡಿಸಬೇಕಾಯಿತು.