ಮೈಸೂರು: ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಕಾಮಗಾರಿ ಸಂಬಂಧ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವೆ ಜಟಾಪಟಿ ಪ್ರಾರಂಭವಾಗಿದೆ.
ಸಂಸದ ಪ್ರತಾಪ್ ಸಿಂಹ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಶಾಸಕ ರಾಮದಾಸ್ ಅವರು ಪ್ರಧಾನಿ ಮೋದಿಜಿ ಅವರಿಗಿಂತ ಮೊದಲು ರಾಜಕೀಯಕ್ಕೆ ಬಂದವರು, ಅವರು ಕಾರ್ಪೊರೇಟ್ ಆಗಿದ್ದವರು ನಂತರ ಶಾಸಕರಾದರು ನಂತರ ಮಂತ್ರಿಗಳಾಗಿದ್ದವರು. ಅವರಿಗೆ ಎಲ್ಲವೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿಜಿ ಅವರ ಹಲವಾರು ಕಾರ್ಯಕ್ರಮಗಳನ್ನು ಪ್ರಶಂಸಿಸಿ ಶಾಸಕ ರಾಮದಾಸ್ ಅವರು ಕಾರ್ಯಕ್ರಮ ಮಾಡಿದ್ದಾರೆ, ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವುದು ಕೂಡ ಮೋದಿಯವರ ಕನಸು. ಆದರೆ ಈ ಕಾರ್ಯಕ್ರಮಕ್ಕೆ ರಾಮದಾಸ್ ಏಕೆ ಹಿನ್ನಡೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧ ಮೈಯರ್ ಸುನಂದ ಪಾಲನೇತ್ರ ಅವರ ನೇತೃತ್ವದಲ್ಲಿ ಗುರುವಾರ ಸಭೆ ಕರೆಯಲಾಗಿತ್ತು,ಆದರೆ ಮೈಸೂರಿನ ಯಾವ ಶಾಸಕರೂ ಸಭೆಗೆ ಬರಲಿಲ್ಲ, ಕೊರಮ್ ಇಲ್ಲದ ಕಾರಣ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮದಾಸ್ ಕೂಡ ನಮ್ಮ ಕೆ ಆರ್ ಕ್ಷೇತ್ರದಲ್ಲಿ ಶೇ.80ರಷ್ಟು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ.ಈಗ ಗ್ಯಾಸ್ ಪೈಪ್ ಲೈನ್ ಅಳವಡಿಸಲು ರಸ್ತೆ ಅಗೆಯುವುದು ಸರಿಯಲ್ಲ ಅದಕ್ಕೆ ನಮ್ಮ ವಿರೋಧ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ
ಗುರುವಾರ ಮೇಯರ್ ಸುನಂದಾ ಪಾಲನೇತ್ರ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು, ಆದರೆ ಅದರಲ್ಲಿ ಯಾವುದೇ ವಿಷಯವನ್ನು ಸರಿಯಾಗಿ ತಿಳಿಸಿಲ್ಲದ ಕಾರಣ ಸಭೆಗೆ ಹೋಗಲಾಗಿಲ್ಲ ಅದು ಬಿಟ್ಟು ಬೇರೆ ಕಾರಣ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧ ಮತ್ತೊಬ್ಬ ಶಾಸಕ ನಾಗೇಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದು ಈ ಕಾಮಗಾರಿಗೆ ಸುಮಾರು ಐನೂರು ಕಿಲೋಮೀಟರ್ ರಸ್ತೆ ಅಗೆಯುವುದಾಗಿ ತಿಳಿದು ಬಂದಿದೆ.
ಹೀಗೆ ಮಾಡುವುದರಿಂದ ಚೆನ್ನಾಗಿರುವ ರಸ್ತೆ ಹಾಳಾಗುತ್ತದೆ.ಅಲ್ಲದೆ ಹಣ ಕೂಡ ವೆಚ್ಚವಾಗುತ್ತದೆ ಇದನ್ನು ಸಂಸದ ಪ್ರತಾಪ್ ಸಿಂಹ ಕೊಡುತ್ತಾರೆಯೆ ಮತ್ತು ರಸ್ತೆಯನ್ನು ಸರಿಪಡಿಸಿ ಕೊಡುತ್ತಾರೆಯೆ ಎಂದು ಪ್ರಶ್ನಿಸಿದ್ದಾರೆ.

